(ಸಾಂದರ್ಭಿಕ ಚಿತ್ರ)

ಕಾರವಾರ: ಮತ ಯಾಚನೆಯ ವಿಷಯದಲ್ಲಿ ಮಾತಿಗೆ ಮಾತು ಬೆಳೆದು, ಸಂದೀಪ ಕಾಂಬಳೆ ಎಂಬುವರ ಮನೆಯ ನಾಯಿಯನ್ನು ಬಲಿ ತೆಗೆದುಕೊಂಡ ಘಟನೆ ನಗರದ ಥಾಮ್ಸೆವಾಡದಲ್ಲಿ ನಡೆದಿದೆ.

ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುನೀಲ್‌‌ ಥಾಮ್ಸೆ ಒತ್ತಾಯಿಸಿದರು. ಅದಕ್ಕೆ ಒಪ್ಪದಿದ್ದಾಗ ಬುಧುವಾರ ರಾತ್ರಿ ವೇಳೆ ನಮ್ಮ ಮನೆಯ ನಾಯಿಗೆ ಏರ್‌‌ ಗನ್‌ನಿಂದ ಗುಂಡು ಹಾರಿಸಿದ್ದಾರೆ. ಇದನ್ನು ಪ್ರಶ್ನಿಸಿದ ಸಹೋದರನ ಮೇಲೆ ದೊಣ್ಣೆಯಿಂದ ತಲೆ, ಮುಖದ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆಂದು ಸಂದೀಪ್ ಕಾಂಬಳೆ ಕಾರವಾರ ನಗರಠಾಣೆಯಲ್ಲಿ ದೂರು ನೀಡಿದ್ದಾರೆ.

ಇದಾದ ಸ್ವಲ್ಪ ಹೊತ್ತಿನಲ್ಲಿ ಸುನೀಲ್ ಥಾಮ್ಸೆ ಸಂದೀಪ ಕಾಂಬಳೆ ಕುಟುಂಬದವರು ಜಗಳ ಮಾಡಿ, ತೊಂದರೆ ನೀಡಿದರೆಂದು ಪ್ರತಿ ದೂರು ನೀಡಿ ಸಿವಿಲ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಪ್ರಾಣಿ ದಯಾ ಸಂಘದ ಸದಸ್ಯೆಯೋರ್ವರ ಸಹಾಯದಿಂದ ಸಚಿವೆ ಮೇನಕಾ ಗಾಂಧಿ ಅವರಿಗೆ ಘಟನೆಯ ವಿವರ ತಿಳಿದು, ಅವರು ಘಟನೆಯ ಕ್ರಮಕ್ಕೆ ಸೂಚಿಸಿದ ಸಂಗತಿ ಸಹ ನಡೆದಿದೆ.

RELATED ARTICLES  ಜಿ.ಎಸ್‌ .ಬಿ ಸಮಾಜದ ಶ್ರೀ ಗೋಪಿನಾಥ ಸೇವಾ ವಾಹಿನಿಯ ವಾರ್ಷಿಕ ಸಹಮಿಲನ ಯಶಸ್ವಿ.

ತಕ್ಷಣ ನಾಯಿಯ ಮಾಲೀಕರಾದ ಸಂದೀಪ ಕಾಂಬಳೆ ಮನೆಗೆ ಧಾವಿಸಿದ ಪೊಲೀಸರು ಗಾಯಗೊಂಡ ನಾಯಿಯನ್ನು ಠಾಣೆಗೆ ತಂದು ಚಿಕಿತ್ಸೆಗಾಗಿ ಪಶು ವೈದ್ಯರಿಗೆ ತಡಕಾಡಿದ್ದಾರೆ. ಆದರೆ, ಕಾರವಾರದಲ್ಲಿ ಪಶು ವೈದ್ಯರು ಸಿಗದೇ ಅದನ್ನು ಏ. 19 ರಂದು ಬೆಳಗಿನ ಜಾವ ಅಂಕೋಲಾ ಪಶು ವೈದ್ಯಕೀಯ ಚಿಕಿತ್ಸೆಗೆ ಸಾಗಿಸುವಾಗ ಗಾಯಗೊಂಡ ನಾಯಿ ದಾರಿ ಮಧ್ಯೆದಲ್ಲೇ ಪ್ರಾಣ ಬಿಟ್ಟಿದೆ. ಅಂಕೋಲಾ ಪಶು ವೈದ್ಯರಿಂದ ನಾಯಿಯ ಮರಣೋತ್ತರ ಪರೀಕ್ಷೆ ಮಾಡಿದಾಗ ಅದರಲ್ಲಿ ಏರ್‌‌ ಗನ್ ಬುಲೆಟ್ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ನಗರ ಠಾಣೆಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

RELATED ARTICLES  ಅಪ್ರತಿಮ ಸಾಧನೆ ತೋರಿದ ಕುಮಟಾದ ಗಿಬ್ ಆಂಗ್ಲಮಾಧ್ಯಮ

ನಾಯಿ ಕೊಂದ ಸುನೀಲ್ ಥಾಮ್ಸೆ ಆರಾಮವಾಗಿ ತಿರುಗಾಡಿಕೊಂಡಿದ್ದಾರೆ. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ಬುಧುವಾರ ಸಂಜೆ ಸುನೀಲ್ ಥಾಮ್ಸೆ ನನ್ನ ಅತ್ತಿಗೆ ಸಾಕ್ಷಿ ಸಂತೋಷ ಕಾಂಬಳೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ಅದು ತಪ್ಪಿ ನಮ್ಮ ಮನೆಯ ನಾಯಿಗೆ ತಗುಲಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಒತ್ತಾಯಿಸಿದ ಸುನೀಲ್ ಥಾಮ್ಸೆ ಮಾತಿಗೆ ನಮ್ಮ ಕುಟುಂಬ ಕಿಮ್ಮತ್ತು ನೀಡದ ಕಾರಣ ಈ ದೌರ್ಜನ್ಯ ನಡೆದಿದೆ. ನಮ್ಮ ಕುಟುಂಬಕ್ಕೆ ಭಯ ಆವರಿಸಿದೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕಾಂಬಳೆ ಸಹೋದರರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.