ಹಳಿಯಾಳ: ‘ಕಾಳಿನದಿ ನೀರಾವರಿ ಯೋಜನೆಯನ್ನು ಸ್ವಂತ ಹಾಗೂ ಪ್ರಾಮಾಣಿಕ ಪರಿಶ್ರಮದಿಂದ ಮಂಜೂರು ಮಾಡಿಸಲಾಗಿದೆ. ಇದನ್ನು ಚುನಾವಣಾ ತಂತ್ರ ಎಂದು ಟೀಕಿಸಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಇಲ್ಲಿನ ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ ತಮ್ಮ ಹೇಳಿಕೆಯನ್ನು ಸಾಬೀತುಪಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸವಾಲು ಹಾಕಿದರು.

ವಿಧಾನಸಭೆ ಚುನಾವಣೆಗೆ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರ ಅವರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿ ಎದುರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಅವರು ತಮ್ಮ ಹೇಳಿಕೆ ಸಾಬೀತುಪಡಿಸದಿದ್ದರೆ ರಾಜೀನಾಮೆ ನೀಡಬೇಕು ಅಥವಾ ಕಣದಿಂದ ಹಿಂದೆ ಸರಿಯಬೇಕು ಎಂದು ನಾನು ಕೇಳುವುದಿಲ್ಲ. ಬದಲಿಗೆ ಅವರು ತಮ್ಮ ಬೇಜವಾಬ್ದಾರಿ ಹೇಳಿಕೆಗೆ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

RELATED ARTICLES  ಅದ್ಧೂರಿಯಾಗಿ ಜರುಗಿದ ಗೋಕರ್ಣದ ಬಾವಿಕೊಡ್ಲದ (ನಂ.01)ಶಾಲೆಯ ವಾರ್ಷಿಕೋತ್ಸವ.

‘ಸರ್ವತೋಮುಖ ಅಭಿವೃದ್ಧಿ’: ಹಳಿಯಾಳ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳಾಗಿವೆ. ವಿರೋಧ ಪಕ್ಷದ ಮುಖಂಡರಿಗೆ ಮಾತನಾಡಲು ವಿಷಯವೇ ಇಲ್ಲದಂತಾಗಿದೆ. ಕಾಳಿನದಿ ನೀರಾವರಿ ಯೋಜನೆ, ದಾಂಡೇಲಿ ಹೊಸ ತಾಲ್ಲೂಕು, ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಗಳನ್ನು ರೂಪಿಸಲಾಗಿದೆ. ಈ ರೀತಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳಿಂದ ಜನರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಗದು ದೊರೆಯುತ್ತಿಲ್ಲ ಎಂದು ದೂರಿದರು.

RELATED ARTICLES  ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪತ್ನಿ ರಾಧಾಬಾಯಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹಳಿಯಾಳದ ಸುಭಾಸ ಕೋರ್ವೇಕರ, ದಾಂಡೇಲಿಯ ಸೈಯದ್ ತಂಗಳ್ ಅವರೂ ಇದ್ದರು.

ಪುತ್ರರಾದ ಪ್ರಶಾಂತ ಹಾಗೂ ಪ್ರಸಾದ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡರಾದ ಸದಾನಂದ ದಬಗಾರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಮಹೇಶ್ರೀ ಮಿಶ್ಯಾಳೆ, ಲಕ್ಷ್ಮೀ ಕೋರ್ವೇಕರ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಅವರೂ ಇದ್ದರು.