ಶಿರಸಿ: ಸೂಕ್ತ ಎದುರಾಳಿಗಳಿಲ್ಲದೆ ಅನೇಕ ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಆಗಿ ಪರಿವರ್ತಿತವಾಗಿದ್ದ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದ ಕಾರಣ ಟಿಕೆಟ್ ಅನ್ನು ಹಿಂದುಳಿದ ವರ್ಗದ ಪ್ರಬಲ ಮುಖಂಡ ಭೀಮಣ್ಣ ನಾಯ್ಕರಿಗೆ ನೀಡಲಾಗಿದೆ. ಬಾರಿ ಪೈಪೋಟಿಯಿಂದ ಕೂಡಿದ ಪ್ರತಿಷ್ಠಿತ ಶಿರಸಿ-ಸಿದ್ದಾಪುರ ಕ್ಷೇತ್ರದ ಟಿಕೆಟ್ ಗಳಿಸುವ ಮೂಲಕ ಭೀಮಣ್ಣ ನಾಯ್ಕ ತಮ್ಮ ಶಕ್ತಿಯ ಪ್ರದರ್ಶನವನ್ನೂ ಮಾಡಿದ್ದಾರೆ.
ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ, ಮಾಜಿ ಸಚಿವರಿಗೆ ಟಿಕೆಟ್ ಸಿಗದೇ ಪರದಾಡುವಂತ ಪರಿಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಪರ ಹೈಕಮಾಂಡ ಒಲವು ತೋರಿದ್ದು, ಅಭಿಮಾನಿಗಳ ಪಾಳಯದಲ್ಲಿ ಹರ್ಷದ ವಾತಾವರಣ ಸೃಷ್ಟಿ ಮಾಡಿದೆ ಎಂದೇ ಬಣ್ಣಿಸಲಾಗಿದೆ.
ಈಗಾಗಲೇ ಪಕ್ಷದ ಬಿ ಪಾರಂ ಪಡೆದಿರುವ ಭೀಮಣ್ಣ ನಾಯ್ಕ ಸೋಮವಾರ ಎಪ್ರಿಲ್ 23 ರಂದು ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರಂತೆ.
ಈ ಮೂಲಕ ಸೋಮವಾರ ಶಿರಸಿಯಲ್ಲಿ ಕಾಂಗ್ರೆಸ್ ನ ಶಕ್ತಿ ಪ್ರದರ್ಶನ ನಡೆಯುವದು ಖಚಿತವೆನ್ನಲಾಗಿದ್ದು, ಜಿಲ್ಲೆಯ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಭೀಮಣ್ಣ ನಾಯ್ಕ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಸೇರುವ ಸಾಧ್ಯತೆಗಳಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.