ಟೆಲೆಕಾಂ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿ ಹಾಡಿದ ಮುಖೇಶ್ ಅಂಬಾನಿ ಒಡೆತನದ ಜಿಯೋ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಉಂಟುಮಾಡಿತ್ತು. ಈಗ ತನ್ನ ವಾರ್ಷಿಕ ಆದಾಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಸದೊಂದು ಯೋಜನೆಗೆ ಕೈ ಹಾಕಿದೆ.
ಹೌದು, ಈವರೆಗೆ ಮೊಬೈಲ್ ಗೆ ಮಾತ್ರ ಸಿಮ್ ಹಾಕ್ಬೇಕಾಗಿತ್ತು… ಆದರೆ ಇನ್ನು ಲ್ಯಾಪ್ ಟಾಪ್ ನಲ್ಲಿ ಸಿಮ್ ಕಾರ್ಡ್ ಅಳವಡಿಸುವ ವ್ಯವಸ್ಥೆಯೊಂದನ್ನು ಜಿಯೋ ಪರಿಚಯಿಸಲಿದೆ. ಈ ಹೊಸ ಆವಿಷ್ಕಾರದ ಸಂಬಂಧ ಈಗಾಗಲೇ ಅಮೇರಿಕಾದ ಸಂಸ್ಥೆ ಕ್ವಾಲ್ಕಂ(Qualcomm) ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದೆ.
ರಿಲಯನ್ಸ್ ಜಿಯೋ ಮತ್ತು ಕ್ವಾಲ್ಕಂ ಜೊತೆಯಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಈ ತಂತ್ರಜ್ಞಾನದಲ್ಲಿ ಹೊಸ ಲ್ಯಾಪ್ ಟಾಪ್ ಮೂಲಕ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಇನ್ ಬಿಲ್ಟ್ ( in built) ಸೆಲ್ಯೂಲರ್ ಸಂಪರ್ಕವನ್ನು ನೀಡಲಿದೆ. ‘ನಾವು ಈ ಕುರಿತು ಈಗಾಗಲೇ ಜಿಯೋ ಜೊತೆ ಮಾತಾಡಿದ್ದು, ನಮ್ಮ ಡಿವೈಸ್ ಜೊತೆ ಅವರು ಡಾಟಾ ಒದಗಿಸಲಿದ್ದಾರೆ’ ಎಂದು ಕ್ವಾಲ್ಕಂ ಟೆಕ್ನಾಲಜೀಸ್ ನ ಸೀನಿಯರ್ ಡೈರೆಕ್ಟರ್ ಮಿಗುಲ್ ನ್ಯುನಸ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಸ್ನ್ಯಾಪ್‌ಡ್ರಾಗನ್ 835 ನಿಯಂತ್ರಿತ ಅತ್ಯಾಧುನಿಕ ಲ್ಯಾಪ್‌ಟ್ಯಾಪ್ ಹೊರತರುವ ನಿಟ್ಟಿನಲ್ಲಿ ಸ್ಮಾರ್ಟನ್ ಸಂಸ್ಥೆಯ ಜತೆಗೂ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.