ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಅರಬ್ಬೀ ಸಮುದ್ರದಲ್ಲಿ ಶನಿವಾರ ರಾತ್ರಿ ಪ್ರಾರಂಭವಾಗಿದ್ದ ಅಲೆಗಳ ಅಬ್ಬರ ಭಾನುವಾರ ಕೂಡ ಮುಂದುವರೆದಿದ್ದು, ಈ ಹಿನ್ನಲೆಯಲ್ಲಿ ಸಾವು-ನೋವುಗಳನ್ನು ತಪ್ಪಿಸುವ ಸಲುವಾಗಿ ನೀರಿಗಿಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.
ಕಡಲ ತೀರದ ಬಳಿ ಶನಿವಾರ ಬಂದಿದ್ದ ಜನರು ಎಚ್ಚರಿಕೆ ನಡುವೆಯೂ ನೀರಿಗಿಳಿಯಲು ಮುಂದಾಗುತ್ತಿದ್ದರು. ಹೀಗಾಗಿ ಜನರನ್ನು ತಡೆಯಲು ಬೀಚ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು. ಹೀಗಾಗಿ ಅಧಿಕಾರಿಗಳು ನಿನ್ನೆ ಕಡಲತೀರದ ಸುತ್ತಲೂ ಸಿಬ್ಬಂದಿಗಳನ್ನು ನೇಮಿಸಿ, ಪ್ರವಾಸಿಗರು ನೀರಿಗಿಳಿಯದಂತೆ ನೋಡಿಕೊಳ್ಳುವಂತೆ ಮಾಡಿದ್ದರು.
ಪಣಂಬೂರು ಕಡಲತೀರದಲ್ಲಿ ಮೀನುಗಾರಿಗೆ ನಡೆಸುತ್ತಿದ್ದ ಮೀನುಗಾರರು ಅಲೆಗಳ ಅಬ್ಬರ ಜೋರಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರು.
ತಣ್ಣೀರುಬಾವಿ ಸಿಬ್ಬಂದಿಗಳು ಭಾನುವಾರ ಬೆಳಿಗ್ಗೆ 11 ಗಂಟೆಯಿಂದಲೇ ನೀರಿನಿಂದ ಸಂಪೂರ್ಣವಾಗಿ ದೂರ ಉಳಿಯುವಂತೆ ಜನರಿಗೆ ರೇಡಿಯೋ ಮೂಲಕ ಮಾಹಿತಿ ನೀಡುತ್ತಿದ್ದರು. ಸೂಚನೆಗಳನ್ನು ನೀಡುತ್ತಿದ್ದರೂ ಪ್ರವಾಸಿಗರು ನಮ್ಮ ಮಾತುಗಳನ್ನು ಕೇಳುತ್ತಿರಲಿಲ್ಲ. ಜನರನ್ನು ನಿಯಂತ್ರಿಸುವುದು ಭಾರೀ ಕಷ್ಟವಾಗಿತ್ತು. ಹೀಗಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಟ್ಟುನಿಟ್ಟಾಗಿ ಸೂಚನೆ ನೀಡುವಂತೆ ತಿಳಿಸಲಾಗಿತ್ತು ಎಂದು ತಣ್ಣೀರುಬಾವಿ ಜೀವರಕ್ಷಕ ದಳದ ಸಿಬ್ಬಂದಿ ಪ್ರದೀಪ್ ಕುಮಾರ್ ಅವರು ಹೇಳಿದ್ದಾರೆ.