ಆರೋಗ್ಯಯುತ ಮೂಳೆಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂಗಿಂತ ಅರ್ಧದಷ್ಟನ್ನು ಮಾತ್ರ ವಯಸ್ಕ ಭಾರತೀಯರು ಸೇವಿಸುತ್ತಾರೆ ಎಂದು ಜಾಗತಿಕ ಆಹಾರಕ್ರಮದ ಕ್ಯಾಲ್ಸಿಯಂ ಸೇವನೆಯ ಜಾಗತಿಕ ನಕ್ಷೆ ತಿಳಿಸಿದೆ.
ಮನುಷ್ಯನ ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಗತ್ಯವಾಗಿದ್ದು ದೇಹಕ್ಕೆ ಬೇಕಾದ ಶಕ್ತಿಯ ಶೇಕಡಾ 30ರಿಂದ 35 ಭಾಗದಷ್ಟು ಒದಗಿಸುತ್ತದೆ. ದೇಹದಲ್ಲಿ ಕಡಿಮೆ ಮೂಳೆ ಸಾಂದ್ರತೆ ಆಸ್ಟಿಯೊಪೊರೋಸಿಸ್ ಮತ್ತು ಮುರಿದ ಎಲುಬುಗಳ ಅಪಾಯವನ್ನು ಹೆಚ್ಚಿಸುತ್ತದೆ.
ಭಾರತದಲ್ಲಿ ವಯಸ್ಕರು ದಿನಕ್ಕೆ ಸರಾಸರಿ 429 ಮಿಲಿ ಗ್ರಾಂ ಕ್ಯಾಲ್ಸಿಯಂನ್ನು ಮಾತ್ರ ಸೇವಿಸುತ್ತಾರೆ. ಆದರೆ ದಿನಕ್ಕೆ 800ರಿಂದ 1000 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಅಗತ್ಯವಿರುತ್ತದೆ ಎಂದು ಸರ್ಕಾರೇತರ ಸಂಘಟನೆ ಇಂಟರ್ ನ್ಯಾಷನಲ್ ಆಸ್ಟಿಯೊಪೊರೋಸಿಸ್ ಫೌಂಡೇಶನ್ ತಿಳಿಸಿದೆ.
ನಕ್ಷೆಯಲ್ಲಿ ಒಳಗೊಂಡಿರುವ 74 ದೇಶಗಳಲ್ಲಿ ಅಂದಾಜು ಸರಾಸರಿ ಕ್ಯಾಲ್ಸಿಯಂ ಸೇವನೆ ವಯಸ್ಕರಲ್ಲಿ ವ್ಯತ್ಯಾಸವಾಗಿದೆ. ನೇಪಾಳದಲ್ಲಿ ಪ್ರತಿ ದಿನಕ್ಕೆ 175 ಮಿಲಿ ಗ್ರಾಂ, ಐಲ್ಯಾಂಡ್ ನಲ್ಲಿ ಪ್ರತಿ ದಿನ ಗರಿಷ್ಠ 1233 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಸೇವಿಸುತ್ತಾರೆ.
ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಕ್ಯಾಲ್ಸಿಯಂ ಸೇವಿಸುವವರ ಪ್ರಮಾಣ ಕಡಿಮೆಯಿದೆ. ಪ್ರತಿದಿನಕ್ಕೆ 400ರಿಂದ 700 ಮಿಲಿ ಗ್ರಾಂನಷ್ಟು ಸೇವನೆ ಮಾಡುತ್ತಾರೆ. ಇತ್ತೀಚೆಗೆ ಆಸ್ಟಿಯೊಪೊರೊಸಿಸ್ ಇಂಟರ್ ನ್ಯಾಷನಲ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನಕ್ಕೆ ಈ ನಕ್ಷೆ ಹೋಲುತ್ತದೆ. ವಿಶ್ವದ ಹೆಚ್ಚು ಜನಸಂಖ್ಯೆ ಇರುವ ದೇಶಗಳಾದ ಚೀನಾ ಮತ್ತು ಭಾರತಗಳಲ್ಲಿ ಸರಾಸರಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ಪ್ರತಿದಿನಕ್ಕೆ ಸುಮಾರು 338 ಮಿಲಿ ಗ್ರಾಂಗಳಿಂದ 429 ಮಿಲಿ ಗ್ರಾಂಗಳಷ್ಟಾಗಿದೆ ಎಂದು ಅಧ್ಯಯನದ ಸಹ ಲೇಖಕ ಅಂಬರೀಶ್ ಮಿತಲ್ ಹೇಳುತ್ತಾರೆ.
ಮನುಷ್ಯ ಆಯಸ್ಸಿನ ವಿವಿಧ ಹಂತಗಳಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ವಿಭಿನ್ನವಾಗಿರುತ್ತದೆ. ಹದಿಹರೆಯದಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ಅಧಿಕವಾಗಿ ದೇಹಕ್ಕೆ ಬೇಕಾಗುತ್ತದೆ. ಹಾಲು, ಮೊಸರು, ಬೆಣ್ಣೆ, ಖನಿಜ ಪದಾರ್ಥಗಳನ್ನು ಸೇವಿಸಿದರೆ ಕ್ಯಾಲ್ಸಿಯಂ ಸೇವನೆ ಪ್ರಮಾಣ ಹೆಚ್ಚಾಗುತ್ತದೆ.