ಕಾರವಾರ: ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರಕಟವಾಗಿದೆ. ಶಿರಸಿಯ ಜನಮಾದ್ಯಮ ಪತ್ರಿಕೆ ಸಂಪಾದಕರಾದ ಅಶೋಕ ಹಾಸ್ಯಗಾರ, ಕಾರವಾರದ ಹಿರಿಯ ವರದಿಗಾರ ಡೇಲಿಸಾಲಾರ ಪತ್ರಿಕೆಯ ಮಂಜೂರ್ ಫಹೀಂ ಹಾಗೂ ಟಿವಿ9 ಜಿಲ್ಲಾ ವರದಿಗಾರ ಸಂದೀಪ ಸಾಗರ್ ಅವರಿಗೆ ಈ ವರ್ಷದ ಪ್ರಶಸ್ತಿ ಲಭಿಸಿದೆ.

ಸಂಘದ ಅಧ್ಯಕ್ಷರಾದ ಟಿ ಬಿ ಹರಿಕಾಂತ ಅಧ್ಯಕ್ಷತೆಯ ಸುಭಾಷ್ ದೂಪದಹೊಂಡ, ಶೇಷಗಿರಿ ಮುಂಡಳ್ಳಿ, ನವೀನ್ ಸಾಗರ್, ಹಿರಿಯ ವರದಿಗಾರರಾದ ರಾಮಾ ನಾಯ್ಕ, ವಸಂತಕುಮಾರ ಕತಗಾಲ, ಸಂತೋಷ ನಾಯ್ಕ ಸದಸ್ಯರನ್ನೊಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯು ಈ ಮೂವರ ಹೆಸರನ್ನ ಘೋಷಿಸಿದೆ.

RELATED ARTICLES  ಪಠ್ಯ ಪರಿಷ್ಕರಣೆ ಬುದ್ಧಿಗೇಡಿತನದ ಪರಮಾವಧಿ - ಎಂ. ಜಿ ಭಟ್ಟ

ಜುಲೈ 1ರಂದು ನಗರದ ರಬಿಯಾ ಹಾಲ್ ನಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಅಶೋಕ ಹಾಸ್ಯಗಾರ: ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡ ಅಶೋಕ ಹಾಸ್ಯಗಾರ, ಅತ್ಯುತ್ತಮ ಪೋಟೋಗ್ರಾಫರ್ ಆಗಿದ್ದಾರೆ. ತಮ್ಮ ಪತ್ರಿಕೋದ್ಯಮ ಜೊತೆಗೆ ಕವಿಗಳಾಗಿ ಸಾಹಿತಿ, ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಕಾಲ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡಿದ ಇವರು ಸದ್ಯ ಶಿರಸಿಯ ಜನಮಾದ್ಯಮ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಜೂರ್ ಫಹೀಂ: ಹಿರಿಯ ವರದಿಗಾರರಾದ ಮಂಜೂರ್ ಫಹೀಂ ಮೊದಲು ಪ್ರೌಢಶಾಲೆಯ ಉತ್ತಮ ಶಿಕ್ಷಕರಾಗಿ ಜನಪ್ರಿಯರಾದವರು. ಕಳೆದ ನಾಲ್ಕು ದಶಕಗಳಿಂದ ಡೇಲಿ ಸಾಲಾರ ಉರ್ದು ಪತ್ರಿಕೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ನೇಹ ಜೀವಿಯಾದ ಇವರು ಕೋಮು ಸೌಹಾರ್ಧ ಹಾಗೂ ಭಾಷಾ ಸೌಹಾರ್ಧಕ್ಕಾಗಿ ಸದಾ ಹಂಬಲಿಸುತ್ತಿರುವವರು. ಪತ್ರಿಕೋದ್ಯಮದ ಜೊತೆಗೆ ಉರ್ದು ಕವಿಯಾಗಿ ಚಿರಪರಿಚಿತರಾಗಿದ್ದಾರೆ.

RELATED ARTICLES  ಕಾರವಾರದಲ್ಲಿ ಅಮೋನಿಯಂ ನೈಟ್ರೇಟ್ ಸೋರಿಕೆ

ಸಂದೀಪ ಸಾಗರ್: ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಸಂದೀಪ ಸಾಗರ್ ಕಳೆದ ಐದು ವರ್ಷಗಳಿಂದ ಟಿವಿ9 ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವ ಉತ್ಸಾಹಿ ಪತ್ರಕರ್ತರಾದ ಇವರು ಜಿಲ್ಲೆಯ ಜನರೊಂದಿಗೆ ಪ್ರೀತಿ ಸ್ನೇಹದಿಂದ ಬೆರೆತು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವವರಾಗಿದ್ದಾರೆ. ಸಮಾನತೆಯ ಕನಸುಗಾರರಾಗಿದ್ದಾರೆ.