ಬೆಂಗಳೂರು, – ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದವರೆಗೂ ನಾಟಕೀಯ ಬೆಳವಣಿಗೆಗಳು ನಡೆದವು. ಅಭ್ಯರ್ಥಿಗಳ ಬದಲಾವಣೆ, ಬಂಡಾಯಗಾರರ ಮನವೊಲಿಕೆ ಸೇರಿದಂತೆ ಹಲವು ಕಸರತ್ತುಗಳ ನಡುವೆ ಕೊನೆ ಕ್ಷಣದಲ್ಲಿ ಟಿಕೆಟ್ ಪಡೆದ ಅಭ್ಯರ್ಥಿಗಳು ಹರಿಬಿರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು.

ಎರಡೂ ಕಡೆ ಸ್ಪರ್ಧೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದರು. ಬೆಂಬಲಿಗರ ಭಾರೀ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಶವಂತಪುರದಿಂದ ಟಿಕೆಟ್ ಪಡೆದ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ನಾಮಪತ್ರ ಸಲ್ಲಿಸಿದರೆ, ಬಿಟಿಎಂ ಲೇಔಟ್‍ನಿಂದ ಬಿಜೆಪಿಯ ಲಲ್ಲೇಶ್‍ರೆಡ್ಡಿ, ಅರಸೀಕೆರೆ ವಿಧಾನಸಭೆ ಕ್ಷೇತ್ರದಿಂದ ಮರಿಸ್ವಾಮಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಶಿರಾ ವಿಧಾನಸಭಾ ಕ್ಷೇತ್ರದಿಂದ ಎಸ್.ಆರ್.ಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚಂದಗಾಲ ಶಿವಣ್ಣ, ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಸೋಮಶೇಖರ್, ಮಧುಗಿರಿಯಿಂದ ರಮೇಶ್‍ರೆಡ್ಡಿ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದರು.

RELATED ARTICLES  ನಾಮಧಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಶ್ರೀನಿವಾಸಪುರದಿಂದ ಡಾ.ವೇಣುಗೋಪಾಲ್, ಮೇಲುಕೋಟೆಯಿಂದ ಶಿವಲಿಂಗೇಗೌಡ ಮುಂತಾದವರು ನಾಮಪತ್ರ ಸಲ್ಲಿಸಿದರು. ಇಂದು ಕೂಡ ಮೆರವಣಿಗೆ, ರ್ಯಾಲಿ, ರೋಡ್ ಶೋಗಳ ಮೂಲಕ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಶಮನವಾಗದ ಬಂಡಾಯ, ಮುಗಿಯದ ಟಿಕೆಟ್ ಗೊಂದಲ ಮುಂದುವರಿದಿತ್ತು. ಈ ನಡುವೆಯೇ ಬಿ ಫಾರಂ ಪಡೆದವರು ನಾಮಪತ್ರ ಸಲ್ಲಿಸಿದರು. ಬಂಡಾಯಗಾರರ ಮನವೊಲಿಸುವ ಪ್ರಯತ್ನ ಮುಂದುವರಿದಿತ್ತು. ಇನ್ನೂ ಕೆಲವರು ಪಕ್ಷಾಂತರಗೊಂಡು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ಕಾಂಗ್ರೆಸ್ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮಂಡ್ಯ ಕ್ಷೇತ್ರ ಹೊರತುಪಡಿಸಿದರೆ ಯಾವುದೇ ಕ್ಷೇತ್ರದಲ್ಲಿ ಗೊಂದಲವಿದ್ದಂತಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಕೊನೆ ಕ್ಷಣದವರೆಗೆ ಅಭ್ಯರ್ಥಿಗಳ ಆಯ್ಕೆ ಗೊಂದಲ ಬಗೆಹರಿದಿರಲಿಲ್ಲ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಮುಂದುವರಿದಿತ್ತು.

RELATED ARTICLES  Karnataka Rural Infrastructure Development ಸಂಸ್ಥೆಯಲ್ಲಿ ಉದ್ಯೋಗಾವಕಾಶ

Jaggesh 01 768x432

ಕಡೆ ದಿನವಾದ್ದರಿಂದ ಟಿಕೆಟ್ ಸಿಗದವರು ಕೂಡ ನಾಮಪತ್ರ ಸಲ್ಲಿಸಿ ಸ್ಪರ್ಧೆಗಿಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಮೂರು ದಿನ ಬಾಕಿ ಉಳಿದಿದ್ದರಿಂದ ಅಷ್ಟರಲ್ಲಿ ಅತೃಪ್ತರು ಹಾಗೂ ಬಂಡಾಯವೆದ್ದಿರುವ ಆಯಾ ಪಕ್ಷಗಳ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ನಿರಂತರವಾಗಿ ನಡೆಯಲಿದೆ. ಏ.17ರಿಂದ ನಿನ್ನೆಯವರೆಗೆ ಒಟ್ಟು 1127 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕೊನೆಯ ದಿನವಾದ ಇಂದು ಕೂಡ ಪಕ್ಷಾಂತರ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು, ಪಕ್ಷದ ಅಧಿಕೃತ ಅಭ್ಯರ್ಥಿಗಳು, ಸಾಕಷ್ಟು ಮಂದಿ ನಾಮಪತ್ರ ಸಲ್ಲಿಸಿದರು. ನಿನ್ನೆಯವರೆಗೆ 457 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧೆಗಿಳಿದಿದ್ದಾರೆ. ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸಂಜೆ ವೇಳೆಗೆ ಕ್ರಮಬದ್ಧವಾದ ನಾಮಪತ್ರಗಳು ಹಾಗೂ ತಿರಸ್ಕ್ರತ ನಾಮಪತ್ರಗಳನ್ನು ಪ್ರಕಟಿಸಲಾಗುತ್ತದೆ. ನಾಮಪತ್ರ ವಾಪಸ್ ಪಡೆಯಲು ಏ.27ರ ವರೆಗೆ ಕಾಲಾವಕಾಶವಿದೆ.