ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ 19 ವರ್ಷದ ಪರೇಶ್ ಮೇಸ್ತಾ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ.ರಾಜ್ಯ ಸರ್ಕಾರ ತನಿಖೆಗೆ ಒಪ್ಪಿಸಿದ ಬರೋಬ್ಬರೀ ನಾಲ್ಕು ತಿಂಗಳ ಬಳಿಕ ಎಫ್‍ಐಆರ್ ದಾಖಲಿಸಿದೆ. ಈಗಾಗ್ಲೇ ಬಂಧಿತರಾಗಿದ್ದ ಆಜಾದ್ ಅಣ್ಣಿಗೇರಿ, ಆಸಿಫ್ ರಫೀಕ್, ಮೊಹ್ಮದ್ ಫೈಜಲ್ ಅಣ್ಣಿಗೇರಿ, ಇಮ್ತಿಯಾಜ್ ಗಣಿ, ಸಲೀಂ ವಿರುದ್ಧ ಕೇಸ್ ಬಿದ್ದಿದೆ.
ಕಳೆದ ವರ್ಷ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಮೇಸ್ತಾ ಎರಡು ದಿನ ಬಿಟ್ಟು ಶೆಟ್ಟಿಕೆರೆಯಲ್ಲಿ 8ರಂದು ಶವ ಪತ್ತೆಯಾಗಿತ್ತು. ಈ ಕೊಲೆ ಬಳಿಕ ಹೊನ್ನಾವರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮೇಸ್ತಾ ನಿಗೂಢ ಸಾವಿಗೆ ಸಂಬಂಧಿಸಿದಂತೆ ಅವರ ತಂದೆ ಕಮಲಾಕರ ಮೇಸ್ತಾ ಹೊನ್ನಾವರ ಠಾಣೆಯಲ್ಲಿ ಐವರ ಮೇಲೆ ದೂರು ದಾಖಲಿಸಿದ್ದರು. ಹೀಗಾಗಿ ಈವರೆಗೆ ಪ್ರಕರಣ ದಾಖಲಾಗಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರಿಸಲಾಗಿದೆ. ಪ್ರಕರಣ ಸಂಬಂಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸಿಬಿಐಗೆ ಪ್ರಕರಣದ ತನಿಖೆಯ ಹೊಣೆ ನೀಡಿತ್ತು.