ಸಿದ್ದಾಪುರ: ಬಿಜೆಪಿಯ ಶಕ್ತಿ ಕುಂದಿದೆ. ಸಂಘಟನೆಯಲ್ಲಿ ಬಿರುಕು ಬಿಟ್ಟಿದೆ ಎನ್ನುವುದು ಸ್ಪಷ್ಟವಾಗಿದೆ. ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ನಾಯಕರ ಕೊರತೆ ಇರುವುದರಿಂದ ಬೇರೆ ಪಕ್ಷದಿಂದ ಬಂದ ನಾಲ್ಕು ಜನರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಪಕ್ಷದಲ್ಲಿ ಒಗ್ಗಟ್ಟಿಲ್ಲ, ಸಂಘಟನೆ ಇಲ್ಲ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ತಾಲೂಕಿನ ಹಲಗೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರವಾಗಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು.

ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ ಮೊದಲು ಕಾಂಗ್ರೆಸ್ ಕೋಟೆಯಾಗಿತ್ತು. ಈಗಿರುವ ಬಿಜೆಪಿಯ ಭದ್ರಕೋಟೆಯನ್ನು ಒಡೆದು ಪುನಃ ಕಾಂಗ್ರೆಸ್ ತನ್ನಸುಪರ್ಧಿಗೆ ಪಡೆದುಕೊಳ್ಳಲಿದೆ.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿರುವ ಆಶ್ವಾಸನೆಯನ್ನು ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಗೂ ನೋಟು ಅಮಾನ್ಯೀಕರಣದಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ. ಉದ್ಯೋಗ ಸಮಸ್ಯೆ ಹೆಚ್ಚಾಗಿದೆ.

RELATED ARTICLES  ಹೊನ್ನಾವರ ಸಮೀಪ ಅಪಘಾತ : ಇಬ್ಬರ ದುರ್ಮರಣ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಧಿಕಾರದ ಹುಮ್ಮಸ್ಸಿನಲ್ಲಿ ಇಡೀ ವಿಶ್ವಕ್ಕೆ ಆದರ್ಶವಾಗಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ ರಚಿಸಿರುವ ಸಂವಿಧಾನವನ್ನೇ ಬದಲಿಸುತ್ತೇನೆ ಎಂದು ಹೇಳಿಕೆ ನೀಡಿ ನಂತರ ಕ್ಷಮೆ ಕೇಳುವಂತಾಯಿತು.

ದೇಶಭಕ್ತಿ, ರಾಷ್ಟ್ರೀಯತೆ ಇರುವುದು ಬಿಜೆಪಿಯವರಿಗೆ ಮಾತ್ರ ಅಲ್ಲ. ಅವರಿಗಿಂತ ಹೆಚ್ಚು ದೇಶಭಕ್ತಿ ಕಾಂಗ್ರೆಸ್‍ನವರಿಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಮಾಡುವುದರೊಂದಿಗೆ ರೈತರ, ಜನಸಾಮಾನ್ಯರ, ಬಡವರ ಪಕ್ಷವಾಗಿದೆ.

ಎಲ್ಲರೂ ಒಂದಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಇದು ಕಾರ್ಯಕರ್ತರ ಧ್ಯೇಯವಾಗಬೇಕು. ಜಿಲ್ಲೆಯ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ದೇಶಪಾಂಡೆ ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಕೆ.ಜಿ.ನಾಯ್ಕ ಹಸ್ವಂತೆ ಹಾಗೂ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

RELATED ARTICLES  ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ (RERA) ಜಾರಿಯಲ್ಲಿ ಕರ್ನಾಟಕ ದೇಶದಲ್ಲಿಯೇ 2ನೇ ಸ್ಥಾನ.

ಕೆ.ಜಿ.ನಾಯ್ಕ ಹಸ್ವಂತೆ ಈ ಮೊದಲು ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ಬಂಗಾರಪ್ಪ ಅವರು ಬಿಜೆಪಿ ಸೇರ್ಪಡೆಗೊಂಡಾಗ ಇವರು ಅವರ ಹಿಂದೆಯೇ ಬಿಜೆಪಿ ಸೇರ್ಪಡೆಗೊಂಡಿದ್ದರು. ಈಗ ಅಲ್ಲಿ ಸರಿಯಾದ ಸ್ಥಾನಮಾನ ಸಿಗದಿದ್ದರಿಂದ ಪುನಃ ಮರಳಿಗೂಡಿಗೆ ಬಂದಿದ್ದಾರೆ.
ವಿ.ಎಸ್. ಅರಾಧ್ಯ, ಎಸ್.ಬಿ.ಗೌಡರ್, ಅಭ್ಯರ್ಥಿ ಭೀಮಣ್ಣ ನಾಯ್ಕ, ಆರ್.ಎಂ.ಹೆಗಡೆ, ಸುಬ್ರಾಯ ಭಟ್ಟ ಗಡಿಹಿತ್ಲ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ವಸಂತ ನಾಯ್ಕ, ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ವಿ.ಎನ್.ನಾಯ್ಕ, ಈಶ್ವರ ನಾಯ್ಕ ಇತರರಿದ್ದರು.

ಬೇಡ್ಕಣಿ, ಕೊಂಡ್ಲಿ, ಕೋಲಸಿರ್ಸಿ ಹಾಗೂ ಕಾನಸೂರಿನಲ್ಲಿ ಆರ್.ವಿ.ದೇಶಪಾಂಡೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರವಾಗಿ ಪ್ರಚಾರ ನಡೆಸಿದರು.