ಕುಮಟಾ: ಕೆನರಾ ಎಜ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ, ಧೀಮಂತ ನಾಯಕ, ಹಳೆಯ ತಲೆಮಾರಿನ ಕೊಂಡಿ ಎಂ.ವಿ.ಶಾನಭಾಗ ಬುರ್ಡೇಕರ ಅವರಿಗೆ ಕೆ.ಇ.ಸೊಸೈಟಿ ತನ್ನ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿ ಅಗಲಿದ ಮಹಾನ್ ಚೇತನಕ್ಕೆ ಸಂತಾಪ ಸೂಚಕವಾಗಿ ಮೌನ ಪ್ರಾರ್ಥನೆ ಸಲ್ಲಿಸಿತು. ಸೊಸೈಟಿಯ ಕಾರ್ಯಾಧ್ಯಕ್ಷ ವಸುದೇವ ಯಶ್ವಂತ ಪ್ರಭು, ಬುರ್ಡೇಕರ ಅವರು ಎಲ್ಲ ಸಮಾಜದ ಬಡವರ ಪಾಲಿಗೆ ಕಾಮಧೇನುವಿನಂತೆ ಬದುಕಿನುದ್ದಕ್ಕೂ ಸೇವೆಸಲ್ಲಿಸಿ, ಅನೇಕ ದೇವಳಗಳ ಜೀರ್ಣೋದ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇತರರಿಗೆ ಮೇಲ್ಪಂಕ್ತಿ ಹಾಕಿ ಹೋದರು ಅಲ್ಲದೇ ಸಾರ್ವಜನಿಕ ಬದುಕಿನಲ್ಲಿ ಬಹುಮುಖ ವ್ಯಕ್ತಿತ್ವವನ್ನು ತೋರ್ಪಡಿಸಿ ಅಜರಾಮರರಾದರು ಎಂದರು.
ಗೌರವ ಕಾರ್ಯದರ್ಶಿ ಕಮಲಾ ರಾವ್, ತಾವು ಸಂಸ್ಥೆಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲು ಕಾರಣರಾದ ಮಾನ್ಯರಲ್ಲಿ ಮಣ್ಣಮಾಮ ಮೊದಲಿಗರಾಗಿದ್ದರು ಎಂದು ಭಾವುಕರಾದರು. ಕಾರ್ಯದರ್ಶಿ ಎಸ್.ಎನ್.ಪ್ರಭು ಮಾತನಾಡುತ್ತಾ ಮೃತರ ಜೀವಿತಾವಧಿಯ ಸಾಧನೆಗಳನ್ನು ಸ್ಮರಿಸಿದರು. ಸೊಸೈಟಿಯ ಉಪಕಾರ್ಯಾಧ್ಯಕ್ಷ ಶಿರೀಷ ಪಿ.ನಾಯಕ, ವಸಂತ ಎ. ನಿಲ್ಕುಂದ, ಕೃಷ್ಣಾನಂದ ಪೈ, ಸುಧಾಕರ ಶಾನಭಾಗ ನುಡಿ-ನಮನ ಸಲ್ಲಿಸಿದರು. ಸೊಸೈಟಿಯ ಐದು ವಿದ್ಯಾಲಯಗಳ ಮುಖ್ಯಾಧ್ಯಾಪಕರಾದ ಎನ್.ಆರ್.ಗಜು, ಡಿ.ಜಿ.ಶಾಸ್ತ್ರಿ, ವಿನಾಯಕ ಶಾನಭಾಗ, ಶೋಭಾ ಮುಜುಮದಾರ, ಗೀತಾ ಪೈ ಸಂಸ್ಥೆಯ ಆಧಾರ ಕಂಬದಂತಿರುವ ಗಣ್ಯರ ಅಗಲಿಕೆಗೆ ದುಃಖ ವ್ಯಕ್ತಪಡಿಸಿದರು.