ಕುಮಟಾ: ದುರುಳರ ಮರ್ದನ, ಶಿಷ್ಟರ ಪರಿಪಾಲನೆಯ ಪ್ರತೀಕವಾಗಿ ಗ್ರಾಮದೇವಿ ದೇವರಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಿ ಹಾಗೂ ಪರಿವಾರ ದೇವರ ವಿಜಯೋತ್ಸವವಾದ ಪಾರಂಪರಿಕ ಕುಮಟಾ ಬಂಡಿಹಬ್ಬ ಸಂಭ್ರಮೋಲ್ಲಾಸದಿಂದ ಸಂಪನ್ನಗೊಂಡಿತು.
ಹನ್ನೊಂದು ದಿನಗಳವರೆಗೆ ನಿರಂತರ ನಡೆಯುವ ಬಂಡಿಹಬ್ಬದ ಹಿನ್ನೆಲೆಯಲ್ಲಿ ರಕ್ಕಸ ಕುಂಭಾಸುರನ ವಧೆಯ ವಿಜಯದ ಸಂಕೇತವಿದೆ. ತಂತ್ರ ಪ್ರಧಾನ ಪೂಜಾ ವಿಧಾನಕ್ಕೆ ಹೆಸರಾದ ಶ್ರೀಶಾಂತಿಕಾ ಪರಮೇಶ್ವರಿ(ಭೂದೇವತೆ) ಅಮ್ಮನವರ ಹಾಗೂ ಪರಿವಾರ ದೇವತೆಗಳ ವಿಶಿಷ್ಟ ಅನುಷ್ಠಾನಗಳನ್ನು ಮಾಡಿ ಆಕರ್ಷಕ ಕಲಶ ಸಿದ್ಧಪಡಿಸಲಾಗಿತ್ತು. ಕಲಶಧಾರಿಗಳು ದೇವಿಯ ಸನ್ನಿಧಾನದಿಂದ ಹೊರಟು ಕುಂಭೇಶ್ವರ, ರಥಬೀದಿ ಮುಂತಾದ ಪ್ರಮುಖ ದೈವಸನ್ನಿಧಿಗಳಿಗೆ ದರ್ಶನವಿತ್ತು ಪಾರಂಪರಿಕ ಪೂಜೆ ಸಲ್ಲಿಸಲಾಯಿತು.
ಕಲಶದೊಡನೆ ಕಟ್ಟಿಗೆದಾರರು, ಮುಖವಾಡದವರು ಮತ್ತಿತರ ದೈವಪಾತ್ರಿಗಳು ಇದ್ದರು. ಮಾರ್ಗದುದ್ದಕ್ಕೂ ಭಕ್ತಾದಿಗಳು ಕಲಶ ಕಾಣಿಕೆ, ಭಕ್ತಿ ಸಮರ್ಪಿಸಿ ಬಂಡಿಹಬ್ಬದ ಶ್ರೇಯೋಭಾಗಿಗಳಾದರು. ರಾತ್ರಿ ದೈವಪಾತ್ರಧಾರಿಗಳು ನಿಗಿನಿಗಿ ಉರಿಯುವ
ಕೆಂಡವನ್ನು ಬರಿಗಾಲಲ್ಲಿ ದಾಟುವ ಮೂಲಕ ನೋಡುಗರಲ್ಲಿ ರೋಮಾಂಚನ ಮೂಡಿಸಿದರು. ಬಂಡಿಹಬ್ಬದಲ್ಲಿ ಎಲ್ಲ ಸಮಾಜದವರೂ ಸಕ್ರಿಯವಾಗಿ ಪಾಲ್ಗೊಂಡು ಜವಾಬ್ದಾರಿ ನಿರ್ವಹಿಸಿದರು.
ದೇವಾಲಯದಲ್ಲಿ ವಿಶೇಷ ಪೂಜಾ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ವೈವಾಟಿದಾರ ಮೊಕ್ತೇಸರ ಕೃಷ್ಣ ಬಾಬಾ ಪೈ ನೇತೃತ್ವದಲ್ಲಿ ಆಡಳಿತ ಮಂಡಳಿ, ಪ್ರಧಾನ ಅರ್ಚಕ ರಾಜು ಗುನಗಾ, ಭಜಕರು ಮತ್ತಿತರರು ಬಂಡಿಹಬ್ಬದ ಯಶಸ್ಸಿಗೆ ಶ್ರಮಿಸಿದರು. ತಾಲೂಕಿನ ವಿವಿಧೆಡೆಗಳಿಂದ ಹಾಗೂ ದೂರದ ಊರುಗಳಿಂದಲೂ ಶ್ರೀದೇವಿಯ ವಾರ್ಷಿಕ
ವಿಜಯೋತ್ಸವವಾದ ಬಂಡಿಹಬ್ಬ ನೋಡಲು ಕಿಕ್ಕಿರಿದು ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಶಕ್ತಾನುಸಾರ ಸೇವೆ ಸಲ್ಲಿಸಿದರು.