ಶಿರಸಿ: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಯಲ್ಲಾಪುರ ಮುಂಡಗೋಡ ವಿಧಾನಸಭಾ ವ್ಯಾಪ್ತಿಯಲ್ಲಿ 203 ಕಿ.ಮಿ. ಮನೆ ಮನೆಗಳಿಗೆ ಪಾದಯಾತ್ರೆಯ ಮೂಲಕ ಸಂಚರಿಸಿ ಮತಯಾಚನೆ ಮಾಡಲಾಗುವುದೆಂದು ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ರವೀಂದ್ರ ಎ.ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಬನವಾಸಿ ಭಾಗದಲ್ಲಿ ಪ್ರಚಾರಾರ್ಥವಾಗಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಹೇಳಿದ್ದಾರೆ.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏಳು ಜಿಲ್ಲಾ ಪಂಚಾಯತ ವ್ಯಾಪ್ತಿಯ, ಎರಡು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪಾದಯಾತ್ರೆಯನ್ನು ವಿವಿಧ ದಿನಾಂಕ ಹಾಗೂ ವೇಳೆಗಳಲ್ಲಿ ಸಂಚರಿಸಲಿದ್ದೇವೆ ಎಂದು ಹೇಳಿದ್ದಾರೆ.
ಮನೆ ಮನೆಗಳಿಗೆ ಪಾದಯಾತ್ರೆಯ ಮೂಲಕ ಸಂಚರಿಸಲಿರುವ ಸಂದರ್ಭದಲ್ಲಿ ಕಳೆದ 27 ವರ್ಷದಿಂದ ಅರಣ್ಯ ಅತಿಕ್ರಮಣದ ಮಂಜೂರಿಗೆ ಸಂಬಂಧಿಸಿ ನಡೆಸಿದ ಸಂಘಟನೆ, ಹೋರಾಟ ಮತ್ತು ನೆರವು ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿನ ರೈತರ ಸಾಲ ಮನ್ನಾ, ಬೆಂಬಲ ಬೆಲೆ, ಗರ್ಭಿಣಿಯರಿಗೆ 6 ತಿಂಗಳಿಗೆ ರೂ. 6 ಸಾವಿರದಂತೆ ಆರೋಗ್ಯಭತ್ಯೆ, 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾಸಿಕ ರೂ. 5,000/-, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರಿಗೆ ಮಾಸಿಕ ರೂ.10,000/- ವೇತನ ನೀಡುವ, ನಿರುದ್ಯೋಗಿ ಯುವಕರಿಗೆ ಸ್ವಾವಲಂಬನೆ ಯೋಜನೆ ನೀಡುವ ಎಲ್ಲಾ ಅಂಶವನ್ನು ಬಿತ್ತರಿಸಲಾಗುವುದೆಂದು ಹೇಳಿದರು.
ಅಲ್ಲದೇ ಕ್ಷೇತ್ರದ ಅಭಿವೃದ್ಧಿ ದಿಶೆಯಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕಾದ ಕಾರ್ಯವನ್ನು ಮತದಾರರಲ್ಲಿ ಬಿಂಬಿಸುವ ಕಾರ್ಯ ಮಾಡಲಾಗುವುದೆಂದು ತಿಳಿಸಿದ್ದಾರೆ. ಸದ್ರಿ ಪಾದಯಾತ್ರೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸುವುದೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜನತಾದಳ ಜಾತ್ಯಾತೀತ ಬನವಾಸಿ ಬ್ಲಾಕ್‍ನ ಅಧ್ಯಕ ರಾಜಶೇಖರ ಗೌಡ್ರು ಬದನಗೋಡ, ಕಾರ್ಯಾಧ್ಯಕ್ಷ ಮೋಹನ ನಾಯ್ಕ ಅಂಡಗಿ, ಪ್ರಚಾರ ಸಮಿತಿಯ ಅಧ್ಯಕ್ಷ ಕೆರಿಯಾ ಬೊಮ್ಮು ಗೌಡ, ಕಾರ್ಯಾಧ್ಯಕ್ಷ ಪುಟ್ಟಪ್ಪ ಹರಿಜನ ಕಂತ್ರಾಜಿ, ಬ್ಲಾಕ್‍ನ ಉಪಾಧ್ಯಕ್ಷ ಮನೋಜ ನಾಯ್ಕ ಮಳಲಗಾಂವ, ಪ್ರಚಾರ ಸಮಿತಿಯ ಉಪಾಧ್ಯಕ್ಷ ದೇವರಾಜ ಡಿ. ನಾಯ್ಕ ಮಧುರವಳ್ಳಿ, ವಿ.ಎಂ. ಬೈಂದೂರು, ಸೋಮಾ ಗೌಡ ಮುಂತಾದವರು ಉಪಸ್ಥಿತರಿದ್ದರು.