ಕಾರವಾರ: ಜನರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಭ್ರಷ್ಟಾಚಾರ ನಿಗ್ರಹ ಚುನಾವಣೆಯ ವಿಷಯವಾಗಿದೆ ಎಂದು ಕೇಂದ್ರ ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಹೇಳಿದರು.
ಕಾರವಾರದ ಮಿತ್ರ ಸಮಾಜ ಮೈದಾನದಲ್ಲಿ ಸೋಮವಾರ ಸಂಜೆ ಭಾಜಪ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಜಾತಿವಾದದಲ್ಲಿ, ಮತೀಯವಾದದಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಸಂವಿಧಾನವನ್ನು ಬದಲಿಸುವುದಿಲ್ಲ ಎಂದರು.
ಮನುಷ್ಯ ಜಾತಿಯಿಂದ, ಧರ್ಮದಿಂದ ದೊಡ್ಡವನಾಗುವುದಿಲ್ಲ. ಗುಣದಿಂದ ವ್ಯಕ್ತಿ ದೊಡ್ಡವನಾಗುತ್ತಾನೆ. ಅಭಿವೃದ್ಧಿ ರಾಜಕಾರಣದಲ್ಲಿ ಕೇಂದ್ರ ಸರ್ಕಾರ ನಂಬಿಕೆ ಇಟ್ಟಿದೆ. ಜಾತೀಯತೆ ಮತ್ತು ಅಸ್ಪೃಶ್ಯತೆ ಎರಡೂ ತಪ್ಪು. ಎಲ್ಲರಿಗೂ ನ್ಯಾಯ ಮತ್ತು ಸಮಾನ ಅವಕಾಶಗಳು ಸಿಗಬೇಕು. ಎಲ್ಲ ಧರ್ಮಗಳಲ್ಲಿನ ಜನರಲ್ಲಿ ಹಸಿವು ಇದೆ. ಇದನ್ನು ಹೋಗಲಾಡಿಸಲು ಕೇಂದ್ರ `ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವದಲ್ಲಿ ನಂಬಿಕೆ ಇಟ್ಟಿದೆ ಎಂದು ಪ್ರತಿಪಾದಿಸಿದರು.
ನೆಹರೂ ಕಾಲದಿಂದ ದೇಶದ ಬಡತನ, ಹಸಿವು ನಿವಾರಣೆಯ ಘೋಷಣೆಯನ್ನು ಮಾಡುತ್ತಾ ಬರಲಾಯಿತು. ಆದರೆ ಇಂದಿರಾ ಗಾಂಧಿ ಹಸಿವು ಮುಕ್ತ ಭಾರತವನ್ನು ರೂಪಿಸಲಿಲ್ಲ. ರಾಹುಲ್ ಗಾಂಧಿ ಕೇಂದ್ರ ಸರ್ಕಾರದ 4 ವರ್ಷದ ಕಾರ್ಯಾಡಳಿತ ಪ್ರಶ್ನಿಸುವ ಮುನ್ನ ತಮ್ಮ ಕುಟುಂಬದ ಆಡಳಿತವನ್ನು ಪ್ರಶ್ನಿಸಬೇಕಿದೆ. ಕಾಂಗ್ರೆಸ್‌ನಿಂದ ದೇಶದ ಪ್ರಧಾನಿ ಹುದ್ದೆ ಅಲಂಕರಿಸಬಹುದು. ರಾಷ್ಟ್ರಪತಿ ಸಹ ಆಗಬಹುದು. ಆದರೆ ಎಐಸಿಸಿ ಅಧ್ಯಕ್ಷ ಹುದ್ದೆ ನೆಹರು ಕುಟುಂಬದಿಂದ ಬದಲಾಗುವುದಿಲ್ಲ ಎಂದು ನಿತಿನ್ ಗಡ್ಕರಿ ಛೇಡಿಸಿದರು.