ಹೊನ್ನಾವರ: ತಾಲೂಕಿನ ಕೆಕ್ಕಾರಿನ ರಘೂತ್ತಮ ಮಠದಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದ ಸಾನಿಧ್ಯವಹಿಸಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಗೋಕರ್ಣ ಎಂಬುದು ಶಿವಮಯ , ಸಿದ್ಧನೆಂಬ ಶಿವ ಭಕ್ತ ಗೋ ಕರ್ಣಕ್ಕೆ ಬಂದಾಗ ಎಲ್ಲಿ ನೋಡಿದರೂ ಶಿವನನ್ನೇ ಕಂಡ ಹಾಗಾಗಿ ಅಲ್ಲಯೇ ನೆಲೆನಿಂತಂತೆ ಕೆಕ್ಕಾರು ದೇವ ನೆಲೆ, ಇಲ್ಲಿ ಎಲ್ಲ ದೇವರು ಇದ್ದಾರೆ.
ರಾಮಚಂದ್ರಾಪುರ ಮಠ ತ್ರಿಕೋಣ ವಾಗಿರುವ ಮೂರು ಮಹಾ ಶಕ್ತಿಗಳಿಂದ ನೆಲೆಸಿರುವುದು.ಚಂದ್ರಮೌಳೀಶ್ವರ ಹಾಗೂ ರಾಜರಾಜೇಶ್ವರಿ ದೇವಾಲಯ ನಿರ್ಮಿಸಿದ ಸಂತಸ ನಮ್ಮಕಾಲದ್ದು ಎಂದ ಶ್ರೀಗಳು ರಾಜರಾಜೇಶ್ವರಿ ಕೆಕ್ಕಾರಿಗೆ ಬಂದು ನೆಲೆಸಿದ್ದಾಳೆ ಎಂದರು.
ಕೆಕ್ಕಾರಿನಲ್ಲಿ ತಾಯಿ ದೇವಿ ಮೊದಲಿನಿಂದಲೂ ನೆಲೆಸಿರುವವಳು. ತಾಯಿಯ ಸ್ಥಾನ ಸರಿಯಾಗಿ ಇರಿಸಿಕೊಳ್ಳದ ಕೊರತೆ ಕಾಡುತ್ತಿತ್ತು. ಈಗ ತಾಯಿಗೆ ನೆಲೆಸಿಕ್ಕಿದೆ ಇದರಿಂದ ಮಠಕ್ಕೆ ಶುಭ ಭಕ್ತಕೋಟಿಗೂ ಶುಭ ಎಂದು ಆಶೀರ್ವದಿಸಿದರು. ದೇವಿಯ ಕಾರ್ಯಗಳೆಲ್ಲವೂ ಮಂಗಳವಾರ ಹಾಗೂ ಶುಕ್ರವಾರವೇ ನಡೆದಿರುವುದು ವಿಶೇಷವಾಗಿದೆ ಎಂದರು.
ಚಿನ್ನದ ಮೋಹ ತಗ್ಗುವುದು ದಾನದ ಮೋಹ ಹಿಗ್ಗುವುದು ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವುದು ಒಳ್ಳೆಯ ಲಕ್ಷಣ. ರಾಮಾಯಣ ಮಹಾಸತ್ರದಲ್ಲಿ ನಂತರ ಗೋ ಪ್ರಾಣ ಭಿಕ್ಷೆಗೆ ಚಿನ್ನದ ಆಭರಣ ಸಮರ್ಪಣೆ ನಡೆಯುತ್ತಿರುವುದು ರಾಮಚಂದ್ರಾಪುರ ಮಠದ ಹೆಗ್ಗಳಿಕೆ ಎಂದ ಶ್ರೀಗಳು ಚಿನ್ನ ಹಾಗೂ ಆಭರಣ ನಗ ನಾಣ್ಯ ಸಮರ್ಪಣೆ ಎಂಬುದು ಧನ ದೇವಿಯ ಆಗಮನದ ಸಂಕೇತ ಹಾಗೂ ತಾಯಿಯ ಪ್ರಸನ್ನತೆಯ ಸಂಕೇತ ಎಂದರು.
ರಘೂತ್ತಮ ಮಠದ ಆಡಳಿತ ಮಂಡಳಿಯ ಶ್ರೀ ಎಂ.ಕೆ ಹೆಗಡೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಹಿಂದೆ ಚಾತುರ್ಮಾಸ್ಯದ ಸಂದರ್ಭದಲ್ಲಿ ಕೈಗೊಂಡ ಸಂಕಲ್ಪ ಇಂದು ಈಡೇರಿತು ಎಂದವರು ಅಭಿಪ್ರಾಯ ಪಟ್ಟರು.
ಶ್ರೀ ರಾಜರಾಜೇಶ್ವರಿ ದೇವಿಗೆ ಬ್ರಹ್ಮಕಲಶ ಅಭಿಷೇಕ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀ ರಾಜರಾಜೇಶ್ವರಿಗೆ ಶ್ರೀಗಳು ಸ್ವರ್ಣಮುಖ ಸಮರ್ಪಿಸುವದಾಗಿ ಘೋಷಿಸಿದರು. ಶಿಷ್ಯರುಗಳು ರಜತ ಕವಚ ಸಮರ್ಪಣೆಯ ಸಂಕಲ್ಪಮಾಡಿ ಸ್ಥಳದಲ್ಲಿಯೇ ನಿಧಿ ಸಂಗ್ರಹ ಮಾಡಿದರು. ಹಣ,ರಜತ ಹಾಗೂ ವಸ್ತುರೂಪದಲ್ಲಿ ದೇಣಿಗೆಗಳನ್ನು ಸಮರ್ಪಿಸಿ ಶಿಷ್ಯರು ಗುರು ಭಕ್ತಿ ಮೆರೆದರು.