ನವದೆಹಲಿ: ಯುನೆಸ್ಕೊ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿರುವ ವಿಶ್ವಪ್ರಸಿದ್ಧ ತಾಜ್‌ಮಹಲ್‌ನ ಬಣ್ಣ ಬದಲಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಅಚ್ಚಬಿಳುಪಿನ ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ತಾಜ್‌ ಬಣ್ಣ ಮೊದಲಿಗೆ ಹಳದಿ ಬಣ್ಣಕ್ಕೆ ತಿರುಗಿತ್ತು. ನಂತರ ಕಂದು ಬಣ್ಣ ಹಾಗೂ ಈಗ ಹಸಿರು ಬಣ್ಣವಾಗುತ್ತಿದೆ ಎಂದಿರುವ ಸುಪ್ರೀಂ, ‘ದೇಶ ಮತ್ತು ವಿದೇಶಗಳ ತಜ್ಞರನ್ನು ಸಂಪರ್ಕಿಸಿ ತಾಜ್‌ಗೆ ಉಂಟಾಗಿರುವ ಹಾನಿ ಕುರಿತು ಕೇಂದ್ರ ಸರ್ಕಾರ ತಿಳಿಯಬೇಕು. ನಂತರ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದೆ.

‘ತಾಜ್ ಮಹಲ್ ನಾಶವಾಗಬೇಕು ಎಂದು ನಿರ್ಧಾರ ಕೈಗೊಂಡಿಲ್ಲ ಎಂದಾದಲ್ಲಿ ಭಾರತ ಹಾಗೂ ವಿದೇಶಗಳ ತಜ್ಞರನ್ನು ಸಹ ಸಂಪರ್ಕಿಸಬಹುದು’ ಎಂದು ನ್ಯಾಯಮೂರ್ತಿ ಮದನ್‌.ಬಿ. ಲೋಕೂರ್ ಹಾಗೂ ದೀಪಕ್ ಗುಪ್ತಾ ಅವರ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಕಟುವಾಗಿ ಹೇಳಿದೆ.

RELATED ARTICLES  ತೆರೆಯಲಿದೆ ಯಡಿಯೂರಪ್ಪಜೀ ಕ್ಯಾಂಟೀನ್ : 5ರೂ ಗೆ ಊಟ ಉಪಹಾರ!

ಕಾಳಜಿ ಇಲ್ಲವೆ?: ‘ತಜ್ಞರು ಇದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಪ್ರಾಯಶಃ ತಜ್ಞರು ಇದ್ದರೂ ನೀವು ಅವರನ್ನು ಸಂಪರ್ಕಿಸದೆ ಇರಬಹುದು ಅಥವಾ ನಿಮಗೆ ಕಾಳಜಿ ಇಲ್ಲದೆ ಇರಬಹುದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ಎಂ.ಸಿ. ಮೆಹ್ತಾ ಅವರು ಸಲ್ಲಿಸಿದ ಚಿತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಪೀಠ, ತಾಜ್‌ಮಹಲ್ ಬಣ್ಣ ಬದಲಾಗಲು ಕಾರಣ ಏನು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್. ನಾಡಕರ್ಣಿ ಅವರನ್ನು ಪ್ರಶ್ನಿಸಿದೆ.

RELATED ARTICLES  ಅತೀ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯದ ಇಡುಕ್ಕಿ ಡ್ಯಾಮ್ ಗೇಟ್ ತೆರೆಯಲು ಕೇರಳ ಸರ್ಕಾರ ನಿರ್ಧಾರ.

ತಾಜ್‌ಮಹಲ್ ನಿರ್ವಹಣೆಯನ್ನು ಭಾರತೀಯ ಪುರಾತತ್ವ ಇಲಾಖೆ ನೋಡಿಕೊಳ್ಳಬೇಕು ಎಂದು ನಾಡಕರ್ಣಿ ತಿಳಿಸಿದ್ದಾರೆ.

ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಮೇ 9ಕ್ಕೆ ನಿಗದಿಪಡಿಸಿದೆ.

‘ಕಲುಷಿತ ಅನಿಲಗಳಿಂದ ರಕ್ಷಿಸಿ’

ಸುತ್ತಲಿನ ಅರಣ್ಯ ನಾಶವಾಗುತ್ತಿರುವುದು ಹಾಗೂ ಕಲುಷಿತ ಅನಿಲಗಳಿಂದ ತಾಜ್ ಮಹಲ್ ಹಾಳಾಗುತ್ತಿದ್ದು, ಇದನ್ನು ರಕ್ಷಿಸಬೇಕು ಎಂದು ಪರಿಸರವಾದಿ ಮೆಹ್ತಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ತಾಜ್ ಸಂರಕ್ಷಣೆಗಾಗಿ ಸುತ್ತಲಿನ ಬೆಳವಣಿಗೆಗಳ ಕುರಿತು ಸುಪ್ರೀಂ ಕೋರ್ಟ್‌ ನಿಗಾ ಇರಿಸಿದೆ.