ನವದೆಹಲಿ: ‘ದೇಶಕ್ಕೆ ಮೂವರು ಪ್ರಧಾನಿಗಳನ್ನು ನೀಡಿದ ಕುಟುಂಬಕ್ಕೆ ಸೇರಿದ್ದರೂ, ರಾಜಕೀಯದ ಪಟ್ಟುಗಳನ್ನು ಅಷ್ಟಾಗಿ ಕರಗತ ಮಾಡಿಕೊಳ್ಳದವರು’ ಎಂಬ ವಿರೋಧಿಗಳ ಟೀಕೆಯನ್ನು ಎದುರಿಸುತ್ತಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ಮೊದಲ ಸತ್ವ ಪರೀಕ್ಷೆಯಾಗಿದೆ.
ಸೋಲಿನ ಸರಪಳಿಯನ್ನೇ ಸುತ್ತಿಕೊಂಡು ಸಣ್ಣಗಾಗಿದ್ದ ಪಕ್ಷದ ಚುಕ್ಕಾಣಿ ಹಿಡಿಯುವ ತುಸು ಮೊದಲು ಎದುರಾದ ಗುಜರಾತ್ ಚುನಾವಣೆಯ ಪ್ರಚಾರದ ಮುಂದಾಳತ್ವ ವಹಿಸಿಕೊಂಡು, ಯಶಸ್ವಿಯೂ ಆಗಿರುವ ರಾಹುಲ್, ಎಲ್ಲರೂ ತಮ್ಮತ್ತ ತಿರುಗಿ ನೋಡುವಂತಹ ಸಾಧನೆಗೆ ಪಾತ್ರರಾಗಿದ್ದಾರೆ.
ಇದೀಗ ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಹೆಣಗುತ್ತಲೇ ರಾಜಕೀಯ ಆಕಾಂಕ್ಷೆ, ಪಾತಾಳದತ್ತ ಕುಸಿಯುತ್ತಿರುವ ಪಕ್ಷವನ್ನು ಮೇಲೆತ್ತುವ ಸವಾಲು, ಸ್ಥಿತಿಗತಿ ಕುರಿತು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಕರ್ನಾಟಕದ ಚುನಾವಣೆಯು ಆರ್‌ಎಸ್‌ಎಸ್ ವಿಚಾರಧಾರೆಯ ವಿರುದ್ಧದ ಸಂಘರ್ಷವೇ ಆಗಿದೆ. ಮೋದಿಯವರ ಕಠಿಣ ನಿಲುವುಗಳ ವಿರುದ್ಧವೂ ಕರ್ನಾಟಕ ತಕ್ಕ ಉತ್ತರ ನೀಡಲಿದೆ ಎಂಬುದು ಅವರ ವಿಶ್ವಾಸ.