ವಿಜಯಪುರ: ನಗರದಲ್ಲಿ ಈ ಬೇಸಿಗೆಯ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ ಗುರುವಾರ ದಾಖಲಾಯಿತು. ಬಿಸಿಲ ಝಳ ಮತ್ತು ಬಿಸಿ ಗಾಳಿ ಜನಜೀವನವನ್ನು ಹೈರಾಣಾಗಿಸಿದೆ.

ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲ ಯದ ಹವಾಮಾನ ಮುನ್ಸೂಚನಾ ಕೇಂದ್ರದಲ್ಲಿ ಮೇ 1ರಂದು 42 ಡಿಗ್ರಿ, ಮೇ 2ರಂದು 41.2 ಡಿಗ್ರಿ ಹಾಗೂ ಗುರುವಾರ 42 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಮುಂಜಾನೆ 8ರಿಂದಲೇ ಬಿಸಿಲ ಪ್ರಖರತೆ ಹೆಚ್ಚಿದ್ದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5ರವರೆಗೂ ಹೊರಗೆ ಓಡಾಡುವುದು ದುಸ್ತರ ಎಂಬಂಥ ಸನ್ನಿವೇಶ ನಿರ್ಮಾಣಗೊಂಡಿದೆ.

‘ವಿಜಯಪುರ, ‘ಬಿಸಿಯ ದ್ವೀಪ’ದ ವ್ಯಾಪ್ತಿಯೊಳಗೆ ಬರುವುದರಿಂದ ಅಲ್ಲಿನ ತಾಪಮಾನ, ನಮ್ಮ ಹವಾಮಾನ ಕೇಂದ್ರದಲ್ಲಿ ದಾಖಲಾಗುವ ಗರಿಷ್ಠ ತಾಪಮಾನಕ್ಕಿಂತ ಕನಿಷ್ಠ 1ರಿಂದ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿರುತ್ತದೆ. ಅಂದರೆ, ನಗರದ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಈ ಸಾಲಿನಲ್ಲಿ ದಾಖಲಾದ ದಾಖಲೆ ಬಿಸಿಲು ಇದಾಗಿದೆ’ ಎಂದು ಕೇಂದ್ರದ ತಾಂತ್ರಿಕ ಅಧಿಕಾರಿ ಶಂಕರ ಕುಲಕರ್ಣಿ ತಿಳಿಸಿದರು.

RELATED ARTICLES  ಚಿದಂಬರಂ ಕ್ರೀಡಾಂಗಣದಲ್ಲಿ ಅಬ್ಬರಿಸಿದ್ದ ಪಾಂಡ್ಯ ತೊಟ್ಟಿದ್ದು ಮುಂಬೈ ಇಂಡಿಯನ್ಸ್ ಗ್ಲೌಸ್

ಕೃಷಿಗೆ ಪೂರಕ: ‘ವಾತಾವರಣದಲ್ಲಿ ತಾಪಮಾನ ಹೆಚ್ಚಿದಂತೆ ಕೃಷಿಕರಿಗೆ ಅನುಕೂಲವೂ ಹೆಚ್ಚಲಿದೆ. ಮೇ 15ರವರೆಗೂ ಇದೇ ವಾತಾವರಣ ಮುಂದುವರೆದರೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯಲಿದೆ. ಬಿಸಿಲ ತಾಪಮಾನ ಹೆಚ್ಚಿದಂತೆ ಹೊಲದಲ್ಲಿರುವ ಕಳೆ ಬೀಜ ನಾಶವಾಗುತ್ತವೆ. ಕ್ರಿಮಿ–ಕೀಟಗಳು ಬಿಸಿಲ ತಾಪ ತಾಳಲಾರದೆ ಸತ್ತು ಹೋಗುತ್ತವೆ. ಇದು ರೈತರಿಗೆ ಪ್ರಯೋಜನಕಾರಿಯಾಗಲಿದೆ’ ಎನ್ನುತ್ತಾರೆ ಕುಲಕರ್ಣಿ.

‘ಈ ಸಮಯದಲ್ಲಿ ಮಳೆ ಸುರಿದರೆ ಮುಂಗಾರು ಪೂರ್ವ, ಮುಂಗಾರು ಮಳೆ ಸಮರ್ಪಕವಾಗಿ ಸುರಿಯದು. ಮೇ 15ರ ಬಳಿಕವೇ ವರ್ಷಧಾರೆಯಾಗಬೇಕು. ಆ ವೇಳೆಗೆ ಮಾತ್ರ ಸದೃಢ ಮಳೆ ಮೋಡಗಳಿರುತ್ತವೆ. ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ ಮಳೆಯ ಸಾಧ್ಯತೆ ಕ್ಷೀಣಿಸಿದೆ’ ಎಂದು ಅವರು ವಿವರಿಸಿದರು.

RELATED ARTICLES  ಉತ್ತರಕನ್ನಡದ ಕೊರೋನಾ ಅಪ್ಡೇಟ್...!

ಸಿಗ್ನಲ್ ಬಂದ್‌: ‘ಸುಡುವ ಬಿಸಿಲಿನಿಂದ ಮಧ್ಯಾಹ್ನ ವೇಳೆ ಇಡೀ ನಗರವೇ ಸ್ತಬ್ಧಗೊಂಡಿರುತ್ತದೆ. ರಸ್ತೆಗಳು ಬಿಕೋ ಎನ್ನುತ್ತಿರುತ್ತವೆ. ಸಂಚಾರ ಪೊಲೀಸರು ಸಿಗ್ನಲ್‌ ಬಂದ್‌ ಮಾಡಿ, ದ್ವಿಚಕ್ರ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಮುಂಜಾನೆ– ಮುಸ್ಸಂಜೆಯಷ್ಟೇ ಚಟುವಟಿಕೆ ನಡೆಯುತ್ತಿವೆ’ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ಬಸವರಾಜ ಹಳಕಟ್ಟಿ.

‘ಪ್ರಮುಖ ಕೆಲಸಗಳಿದ್ದರಷ್ಟೇ ಮನೆಯಿಂದ ಹೊರಗೆ ಬರ್ತಿವಿ. ಇಲ್ಲದಿದ್ದರೇ ಮುಸ್ಸಂಜೆವರೆಗೂ ಹೊರಗೆ ಹೆಜ್ಜೆಯಿಡಲ್ಲ. ನಸುಕಿನಲ್ಲೇ ಲಘು ಕೆಲಸ ಮುಗಿಸಿಕೊಳ್ತೀವಿ. ಭೇಟಿಗಾಗಿ ಮನೆಗೆ ಬರುವವರಿಗೆ ಚಹಾ, ಬಾದಾಮಿ ಹಾಲಿನ ಬದಲು ಪಾನಕ, ತಂಪು ನೀರು ಕೊಟ್ಟು ಉಪಚರಿಸುತ್ತಿದ್ದೇವೆ’ ಎಂದು ನಗರ ನಿವಾಸಿ ವೆಂಕಟೇಶ ಕೋಲಕಾರ ಹೇಳಿದರು.