ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಚುನಾವಣಾ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 10 ರಂದು ಸಂಜೆ 6 ಗಂಟೆಯಿಂದ ಮೇ 12 ರ ರಾತ್ರಿ 8 ಗಂಟೆಯವರೆಗೆ ಹಾಗೂ ಮತ ಎಣಿಕೆ ದಿನ ಮೇ 15 ರಂದು ಪೂರ್ಣ ದಿನ ಜಿಲ್ಲೆಯಾದ್ಯಂತ ಮದ್ಯವನ್ನು ನಿಷೇಧಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಪರಿಷ್ಕತ ಆದೇಶ ಹೊರಡಿಸಿದ್ದಾರೆ.
ಮತದಾನ ಮತ್ತು ಮತ ಎಣಿಕೆ ದಿನಗಳಂದು ಜಿಲ್ಲೆಯಾದ್ಯಂತ ಎಲ್ಲಾ ವೈನ್ ಶಾಪ್ ಮತ್ತು ಬಾರ್‍ಗಳನ್ನು ಮುಚ್ಚಲು ಆದೇಶಿಸಿದೆ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಮತ್ತು ಅನಧಿಕೃತವಾಗಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಶೇಖರಣೆ ಮಾಡುವದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.