ಉತ್ತರ ಕನ್ನಡ:ವಿಧಾನಸಭೆ ಚುನಾವಣೆಗೆ ಒಂದು ವಾರ ಬಾಕಿಯಿರುವಾಗ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಸ್ಥಳೀಯ ಸಮಸ್ಯೆ, ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಒಳಗೊಂಡ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಪಕ್ಷದ ಪದಾಧಿಕಾರಿಗಳು, ಮುಖಂಡರೊಂದಿಗೆ ಶಿರಸಿ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಣಾಳಿಕೆ ಬಿಡುಗಡೆ ಮಾಡಿದ್ರು. ಕ್ಷೇತ್ರದ ಜನಸಾಮಾನ್ಯರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಶಿರಸಿ ನಗರ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಮುಂದಿನ 20 ವರ್ಷ ಗಮನದಲ್ಲಿಟ್ಟುಕೊಂಡು ಸಮರ್ಪಕ ಕುಡಿಯುವ ನೀರಿನ ಯೋಜನೆ ರೂಪಿಸುವುದು, ಗ್ರಾಮೀಣ ರಸ್ತೆ ಸುಧಾರಣೆ, ಸೇತುವೆ, ಕಾಲುಸಂಕ ನಿರ್ಮಾಣಕ್ಕೆ ವಿಶೇಷ ಆದ್ಯತೆ, ಅಂತರ್ಜಲ ಮಟ್ಟ ಕಾಪಾಡಲು ಇಂಗುಗುಂಡಿ, ಮಳೆನೀರು ಕೊಯ್ಲು, ನೀರಿಂಗಿಸುವ ಯೋಜನೆಗಳಿಗೆ ಪ್ರೋತ್ಸಾಹ, ತೋಟಗಾರಿಕಾ ಸಂಶೋಧನಾ ಕೇಂದ್ರ ಸ್ಥಾಪನೆ, ಶಿರಸಿ-ಸಿದ್ದಾಪುರದ ಕೃಷಿಕರ ಸಾಲದ ಹೊರೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನದ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ. ಪ್ರಣಾಳಿಕೆ ಬಿಡುಗಡೆ ಮಾತನಾಡಿದ, ಭೀಮಣ್ಣ ನಾಯ್ಕ, 2013ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಂತೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ 155 ಭರವಸೆಗಳಲ್ಲಿ ಬಹುತೇಕ ಈಡೇರಿಸಿದೆ. ಅದರಂತೆ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಸಂಬಂಧಿಸಿ ಘೋಷಿಸಲಾದ ಪ್ರಣಾಳಿಕೆ ಪ್ರಕಾರ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ನುಡಿದಂತೆ ನಡೆಯುತ್ತೇನೆ.
ಸಾರ್ವಜನಿಕರು, ತಜ್ಞರು ಹಾಗೂ ಸಮಾಜದ ಎಲ್ಲಾ ಸ್ತರದ ಜನರೊಂದಿಗೆ ಚರ್ಚಿಸಿ ಪ್ರಣಾಳಿಕೆ ಹೊರ ತಂದಿದ್ದೇವೆ. ಇದು ಕೇವಲ ಭರವಸೆಯಾಗಿರದೇ ಸಂಪೂರ್ಣ ಅನುಷ್ಠಾನಕ್ಕೆ ತರುವ ಕರ್ತವ್ಯ ನಮ್ಮದಾಗಿದೆ. ಗ್ರಾಮೀಣ ಭಾಗಕ್ಕೆ ಹೋದಾಗ ಮಹಿಳೆಯರು ತೋಡಿಕೊಳ್ಳುವ ಕಷ್ಟಗಳನ್ನು ಪಟ್ಟಿ ಮಾಡಿ ಮುಂದಿನ ದಿನಗಳಲ್ಲಿ ಪರಿಹಾರ ನೀಡೇ ನೀಡುತ್ತೇವೆ. ಈ ಕ್ಷೇತ್ರದ ಸಮಸ್ತ ಮತದಾರ ಬಾಂಧವರು, ಈ ಬಾರಿ ತಮಗೆ ಅಮೂಲ್ಯ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.