ದಾಂಡೇಲಿ: 1975 ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆವಾಸ ಅನುಭವಿಸಿದ್ದ ಬಿಜೆಪಿಯ ನಗರದ ಹಿರಿಯ ಕಾರ್ಯಕರ್ತ ಜೀವನಸಾ ಮಿಸ್ಕಿನ್ ಇವರನ್ನು ನಗರದ ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ಸ್ಥಳೀಯ ಶಂಕರ ಮಠದಲ್ಲಿ ಗುರುವಾರ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಹಿರಿಯ ಮುಖಂಡ ರಾಧಾಕೃಷ್ಣ ಹೆಗಡೆಯವರು ತುರ್ತು ಪರಿಸ್ಥಿತಿ ಘೋಷಣೆ ಈ ದೇಶದ ಬಹುದೊಡ್ಡ ದುರಂತಗಳಲ್ಲಿ ಒಂದಾಗಿದ್ದು, ಆ ಸಂದರ್ಭದಲ್ಲಿ ದೇಶದ ಲಕ್ಷಾಂತರ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಬಲವಂತವಾಗಿ ಜೈಲಿಗಟ್ಟಲಾಗಿತ್ತು. ಇಡೀ ರಾಷ್ಟ್ರದ ವ್ಯವಸ್ಥೆಯನ್ನು ಬುಡಮೇಲಾಗಿಸಿದ ಅಪಕೀರ್ತಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಸರಕಾರದ್ದಾಗಿದ್ದು, ನಂತರದ ದಿನಗಳಲ್ಲಿ ನಡೆದ ಚುನಾವಣೆಗಳಲ್ಲಿ ಇದರ ಪರಿಣಾಮವನ್ನು ಕಾಂಗ್ರೆಸ್ ಹಂತ ಹಂತವಾಗಿ ಅನುಭವಿಸುವಂತಾಯಿತು. ಇಂದು ಗುಜರಾತಿನಲ್ಲಿ ನರೇಂದ್ರ ಮೋಧಿ ನೇತೃತ್ವದ ವಿದ್ಯಾರ್ಥಿ ಸಂಘಟನೆ ತುರ್ತು ಪರಿಸ್ಥಿತಿಯ ವಿರುದ್ದ ಸಂಪೂರ್ಣ ಹೋರಾಟವನ್ನು ಕೈಗೊಂಡಿತ್ತು. ಅಂದು ಅನ್ಯಾಯದ ವಿರುದ್ದ ಹೋರಾಟವನ್ನು ಕೈಗೊಂಡಿದ್ದ ನರೇಂದ್ರ ಮೋಧಿಯವರು ಇಂದು ದೇಶದ ಪ್ರಧಾನಿಯಾಗಿ ಇಡೀ ವಿಶ್ವದಲ್ಲಿ ಭಾರತಕ್ಕೆ ಶ್ರೇಯಸ್ಸನ್ನು ತಂದುಕೊಟ್ಟ ಹೆಮ್ಮೆಯ ಪ್ರಧಾನಿಯಾಗಿ ಬಿಂಬಿತರಾಗಿದ್ದಾರೆ ಎಂದು ರಾಧಾಕೃಷ್ಣ ಹೆಗಡೆ ಹೇಳಿದರು.
ತುರ್ತು ಪರಿಸ್ಥಿತಿ ಸಮಯದಲ್ಲಿ ಬಿಜೆಪಿಯ ನಾಯಕರಿಂದ ಹಿಡಿದು ಕಾರ್ಯಕರ್ತರು ಜೈಲು ವಾಸ ಅನುಭವಿಸಿರುವುದನ್ನು ಸ್ಮರಿಸಿಕೊಂಡ ಅವರು ಈ ಕಾರಣಕ್ಕಾಗಿಯೆ ಬಿಜೆಪಿ ಪಕ್ಷವು ಪ್ರತಿ ವರ್ಷ ಜೂನು 25 ರಂದು ಕರಾಳ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತಿದೆ. ಈ ಸುಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ 19 ತಿಂಗಳ ಕಾಲ ಬೆಳಗಾವಿಯಲ್ಲಿ ಜೈಲುವಾಸ ಅನುಭವಿಸಿದ್ದ ಜೀವನಸಾ ಮಿಸ್ಕಿನ್ ಅವರನ್ನು ಬಿಜೆಪಿ ಎಸ್.ಸಿ ಮೋರ್ಚಾ ಸನ್ಮಾನಿಸುತ್ತಿರುವುದು ಹರ್ಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಎಂ.ಸಿ.ಹೆಗಡೆ, ರೋಶನ್ ನೇತ್ರಾವಳಿ, ಅಬ್ದುಲ್ ವಹಾಬ ಬನ್ಸಾರಿ, ರಫೀಕ ಹುದ್ದಾರ, ವಿಷ್ಣು ವಾಜ್ವೆ, ಚಿದಾನಂದ ಕಲಶೆಟ್ಟಿ, ಅನಂತ್ರಾಜ ನಾಯ್ಕ, ಪ್ರತಾಪ ಚಿಮ್ಮಕುಟ್ಟಿ, ಸಂಜಯ ಚೌವ್ಹಾನ್, ಅರ್ಜುನ ನಾಯ್ಕ, ಭೀಮಶಿ ಬಾದೋಳಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಬಿಜೆಪಿ ಎಸ್.ಸಿ. ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಚಂದ್ರಕಾಂತ ಕ್ಷೀರಸಾಗರ ವಂದಿಸಿದರು. ಮಂಜುನಾಥ ಹರಿಜನ ಕಾರ್ಯಕ್ರಮ ನಿರೂಪಿಸಿದರು.