ಮೈಸೂರು: ಕೊರಟಗೆರೆಯಲ್ಲಿ ಕುರುಬ ಸುಮುದಾಯ ಮತ ನಿರಾಕರಣೆ ಹಿನ್ನಲೆಯಲ್ಲಿ ಪರಮೇಶ್ವರ್ ಗೆ ಸೋಲಾಗಿತ್ತು, ಇಲ್ಲಿ ಅದೇ ಸಮುದಾಯದ ಎಂ.ಕೆ.ಸೋಮಶೇಖರ್ ಗೆ ದಲಿತರು ಮತ ನೀಡಬೇಕೇ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ ಸಮುದಾಯದ ಮುಖಂಡರು ಪ್ರಶ್ನಿಸಿದ್ದಾರೆ.
ನಿನ್ನೆ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಪರ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು. ಈ ಬಾರಿಯಾದರೂ ದಲಿತರ ಪರ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕು ಎಂದು ಮೈಸೂರಿನಲ್ಲಿ ದಲಿತ ಸಮುದಾಯ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಮಲ್ಲಿಕಾರ್ಜನ ಖರ್ಗೆ ಅವರೇ ಮುಂದಿನ ಸಿಎಂ ಆಗಬೇಕು ಎಂದು ಆಗ್ರಹಿಸಿದರು.
ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಗೆಂದು ಭಾನುವಾರ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ನಗರದ ಅಶೋಕಪುರಕ್ಕೆ ಆಗಮಿಸಿದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎರಡು ಕಡೆ ಮುಖಭಂಗ ಅನುಭವಿಸಿದರು. ತೆರೆದ ಜೀಪಿನಲ್ಲಿ ಖರ್ಗೆ ರೋಡ್ಶೋ ನಡೆಸುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳು, ಖರ್ಗೆ ಅವರನ್ನು ಉದ್ದೇಶಿಸಿ, ‘ಈ ಬಾರಿಯಾದರೂ ದಲಿತರು ಸಿಎಂ ಆಗುತ್ತಾರಾ? ನೀವು ಮುಖ್ಯಮಂತ್ರಿ ಆಗುತ್ತೀರಾ? ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಹೇಳಿದರು.
ಅಂತೆಯೇ ಸಿದ್ದರಾಮಯ್ಯ ಸಂಪುಟದಿಂದ
ವಿ.ಶ್ರೀನಿವಾಸಪ್ರಸಾದ್ ರನ್ನು ಸಂಪುಟದಿಂದ ಕೈಬಿಟ್ಟಿದ್ದು ಸರಿಯೆ? ಕೊರಟಗೆರೆ ಕ್ಷೇತ್ರದಲ್ಲಿ ಕುರುಬ ಜನಾಂಗದವರು ಡಾ.ಜಿ.ಪರಮೇಶ್ವರ್ ಗೆ ಮತ ಹಾಕಲಿಲ್ಲ. ಇಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ನಾವು ಕುರುಬ ಸಮುದಾಯದವರನ್ನು ಎಂ.ಕೆ.ಸೋಮಶೇಖರ್ ಅವರನ್ನು ಗೆಲ್ಲಿಸಬೇಕೆ ಎಂದು ಪ್ರಶ್ನಿಸಿದರು.
ಕಾರ್ಯಕರ್ತರ ಪ್ರಶ್ನೆಗೆ ಕೊಂಚ ಗಲಿಬಿಲಿಯಾದಂತೆ ಕಂಡುಬಂದ ಖರ್ಗೆ, ದಲಿತ ಸಿಎಂ ವಿಚಾರವನ್ನು ಬೀದಿಯಲ್ಲಿ ನಿಂತು ಮಾತನಾಡಲು ಸಾಧ್ಯವಿಲ್ಲ. ಯಾರಿಗೆ ಬೇಕಾದರೂ ಮತ ನೀಡುವ ಸ್ವಾತಂತ್ರ್ಯವನ್ನು ಅಂಬೇಡ್ಕರ್ ನಿಮಗೆ ನೀಡಿದ್ದಾರೆ. ದೇಶದಲ್ಲಿ ಕೋಮುವಾದ, ಜಾತ್ಯತೀತವಾದ ತತ್ವದ ಮೇಲೆ ಚುನಾವಣೆ ನಡೆಯುತ್ತಿದೆ. ಹೀಗಾಗಿ ಯೋಚಿಸಿ ಮತ ಚಲಾಯಿಸಿ ಎಂದು ಹೇಳಿ ಭಾಷಣ ಮೊಟಕುಗೊಳಿಸಿ ತೆರಳಲು ಮುಂದಾದರು.
ಅತ್ತ ಬಸವಲಿಂಗಪ್ಪ ವೃತ್ತದಲ್ಲಿ ಖರ್ಗೆ ಪ್ರಚಾರ ನಡೆಸುತ್ತಿದ್ದಾಗ ಕೆಲ ಸ್ಥಳೀಯರು ‘ಈ ಬಾರಿ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ’ ಎಂದು ಘೊಷಣೆ ಕೂಗುವ ಮೂಲಕ ಮತ್ತೆ ಖರ್ಗೆ ಮುಜುಗರ ತಂದೊಡ್ಡಿದರು.