ಬೆಂಗಳೂರು: ಜಾಲಹಳ್ಳಿಯ ‘ಎಸ್ಎಲ್‌ವಿ’ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 9,746 ಚುನಾವಣಾ ಗುರುತಿನ ಚೀಟಿಗಳು ಮಂಗಳವಾರ ಪತ್ತೆ ಆಗಿವೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್ ನಂಬರ್ 115ರಲ್ಲಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಬಿಜೆಪಿಯ ಕಾರ್ಯಕರ್ತರು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಫ್ಲ್ಯಾಟ್‌ಗೆ ನುಗ್ಗಿದ್ದರು. ಅದೇ ವೇಳೆ ಇಬ್ಬರು ಮಹಿಳೆಯರು ಓಡಿಹೋದರು. ನಾಲ್ವರನ್ನು ಹಿಡಿದುಕೊಂಡ ಕಾರ್ಯಕರ್ತರು, ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಗಳು, ಫ್ಲ್ಯಾಟ್‌ನೊಳಗೆ ಹೋಗಿ ಪರಿಶೀಲನೆ ಆರಂಭಿಸಿದರು. ಗುರುತಿನ ಚೀಟಿಗಳನ್ನು ಎಣಿಸುವ ಕೆಲಸ ರಾತ್ರಿಯಿಡಿ ನಡೆಯಿತು.
‘ಫ್ಲ್ಯಾಟ್‌ನಲ್ಲಿರುವ 9,746 ಗುರುತಿನ ಚೀಟಿಗಳೆಲ್ಲವೂ ಅಸಲಿ ಆಗಿವೆ. ಪಕ್ಷವೊಂದರ ಅಭ್ಯರ್ಥಿ ಪರವಿರುವ ಕೆಲ ಏಜೆಂಟರು, ಮತದಾರರಿಗೆ ಹಣದ ಆಮಿಷವೊಡ್ಡಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವ ಮಾಹಿತಿ ಇದೆ’ ಎಂದು ವಿಚಕ್ಷಣಾ ದಳದ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಿದ್ದರು.
ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಅವರೇ ರಾತ್ರಿ 9 ಗಂಟೆಗೆ ಫ್ಲ್ಯಾಟ್‌ಗೆ ಬಂದು ಪರಿಶೀಲನಾ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಅವರ ಜತೆಗೆ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಇದ್ದರು.
ಒಂದು ಚೀಟಿಗೆ ₹1,000: ‘ಮತದಾರರನ್ನು ಸೆಳೆಯಲೆಂದೇ ಕೆಲ ಅಭ್ಯರ್ಥಿಗಳು, ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ. ಆ ಏಜೆಂಟರು, ಒಬ್ಬ ಮತದಾರರಿಗೆ ₹1,000 ಕೊಟ್ಟು ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವ ಮಾಹಿತಿ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಕೊಳೆಗೇರಿ ಪ್ರದೇಶದಲ್ಲಿ ವಾಸವಿರುವ ಮತದಾರರಿಂದಲೇ ಅತೀ ಹೆಚ್ಚು ಚೀಟಿಗಳನ್ನು ಪಡೆಯಲಾಗಿದೆ. ಅವುಗಳನ್ನೇ ಫ್ಲ್ಯಾಟ್‌ನಲ್ಲಿ ಸಂಗ್ರಹಿಡಲಾಗಿದೆ. ಮತದಾನದ ದಿನದಂದೇ ಆ ಚೀಟಿಗಳನ್ನು ಮತದಾರರಿಗೆ ಕೊಟ್ಟು ತಮ್ಮ ಪರ ಅಭ್ಯರ್ಥಿಗೆ ಮತ ಹಾಕಿಸಲು ಏಜೆಂಟರು ಯೋಚಿಸಿದ್ದರು’ ಎಂದರು.
‘ರಾತ್ರಿಯಾದರೂ ಚೀಟಿಗಳ ಎಣಿಕೆ ಕಾರ್ಯ ಮುಗಿದಿಲ್ಲ. ಯಾವ ಅಭ್ಯರ್ಥಿಗಳ ಪರವಾಗಿ ಈ ಚೀಟಿಗಳನ್ನು ಸಂಗ್ರಹಿಸಲಾಗಿತ್ತು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಅವರು ಹೇಳಿದರು.