ಗೋವು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದು ಅದರ ಸಂರಕ್ಷಣೆ ಪ್ರತಿಯೋರ್ವನ ಕರ್ತವ್ಯವಾಗಿದೆ. ಗೋವಿಲ್ಲದ ಭೂಮಿಯನ್ನು ನೆನೆಯಲೂ ಅಸಾಧ್ಯವಾಗಿದೆ. ಸಹಸ್ರ ಸಂಖ್ಯೆಯ ಗೋವಿನ ಆವಾಸ ಸ್ಥಾನ, ಗೋವಿಗೆ ಪ್ರಕೃತಿದತ್ತ ಸಹಜ ಬದುಕಿಗೆ ಅನುವುಮಾಡಿಕೊಡುವ ಸಂಪೂರ್ಣ ಸಜ್ಜೀಕರಣದ, ಪರಮಪೂಜ್ಯ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿಶಿಷ್ಟ ಪರಿಕಲ್ಪನೆಯ ಮಹತ್ವಾಕಾಂಕ್ಷೀ ಯೋಜನೆ `ಗೋಸ್ವರ್ಗ’ ಮೇ 27ರಂದು ಸಿದ್ಧಾಪುರದ ಭಾನ್ಕುಳಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಮಹಾಮಂಡಲದ ಉಲ್ಲೇಖ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ ತಿಳಿಸಿದರು.

ಅವರು ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ ಎಣ್ಮಕಜೆ, ಪಳ್ಳತ್ತಡ್ಕ, ಪೆರಡಾಲ ಹಾಗೂ ಚಂದ್ರಗಿರಿ ವಲಯಗಳ ವಿಶೇಷ ಸಭೆ `ಗೋಸ್ವರ್ಗ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಂಡಲದ ಪ್ರತೀವಲಯದಲ್ಲಿಯೂ ಮಾತೃವಿಭಾಗದ ನೇತೃತ್ವದಲ್ಲಿ ತಲಾ 10 ತಂಡಗಳ ಮುಖಾಂತರ ಪ್ರತೀ ಶಿಷ್ಯರ ಮನೆಗೆ `ಅಕ್ಷತಾಮಂತ್ರಣದ ಮಹಾಭಿಯಾನ’ ನಡೆಸುವಂತೆ ಅವರು ಸಭೆಗೆ ತಿಳಿಸಿದರು.

RELATED ARTICLES  ಹೆಗಡೆ ಹೆಣ್ಣುಮಕ್ಕಳ ಶಾಲೆಯಲ್ಲಿ ಗ್ರಹಣ ವೀಕ್ಷಣೆ

ಮಂಡಲ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಅವರು ಮಾತನಾಡುತ್ತಾ ಶ್ರೀ ಗುರುಗಳು ಪೀಠಾರೋಹಣಗೈದು ಅರ್ಧ ಮಂಡಲ (24 ವರ್ಷ) ಪೂರೈಸುವ ಸಂದರ್ಭದಲ್ಲಿ ಶ್ರೀ ಮಠದ ಯೋಜನೆಗಳಿಗೆ ಈ ತನಕ ತನುಮನಧನಗಳ ನೆರವಿತ್ತ ಶಿಷ್ಯರಿಗೆ ಶ್ರೀ ಗುರುಗಳು ವಿಶೇಷ ಅನುಗ್ರಹ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿದ್ದಾರೆ ಎಂದು ತಿಳಿಸುವುದರೊಂದಿಗೆ `ದಾನ ಮಾನ ಸಮಾವೇಶ ‘ದ ಮಾಹಿತಿಯನ್ನು ನೀಡಿದರು.
ಮಂಡಲ ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಪೈಸಾರಿ ಧ್ವಜಾರೋಹಣಗೈದು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರ್ಮುಖ ` ಸುರಭಿ ಸೇವಕಿ ‘ ಯರ ಕಾರ್ಯವಿಧಾನದ ಸಮಗ್ರ ರೂಪುರೇಷೆಗಳನ್ನು ನೀಡಿದರು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಪ್ರಸ್ತಾವನೆಗೈದರು. ಸಹಾಯ ವಿಭಾಗದ ಡಾ| ಡಿ.ಪಿ. ಭಟ್, ಶಿಷ್ಯಮಾಧ್ಯಮ ಪ್ರಧಾನ ಸರಳಿ ಮಹೇಶ, ವಿದ್ಯಾರ್ಥಿ ವಾಹಿನೀ ಪ್ರಮುಖ ಕೇಶವ ಪ್ರಸಾದ ಎಡೆಕ್ಕಾನ, ಬಿಂದು ಸಿಂಧು ಪ್ರಧಾನೆ ದೇವಕಿ ಪನ್ನೆ, ವೃತ್ತಿಪರ ವಿಭಾಗ ಪ್ರಮುಖ ವೈ.ಕೆ. ಗೋವಿಂದ ಭಟ್ ಕಾಸರಗೋಡು, ಮಂಡಲ ಮುಷ್ಟಿಅಕ್ಕಿ ಪ್ರಧಾನೆ ಗೀತಾಲಕ್ಷ್ಮೀ ಮುಳ್ಳೇರಿಯ ಭಾಗವಹಿಸಿ ಮಾಹಿತಿಯನ್ನು ನೀಡಿದರು.
ಎಣ್ಮಕಜೆ, ಪಳ್ಳತ್ತಡ್ಕ, ಪೆರಡಾಲ, ಚಂದ್ರಗಿರಿ ವಲಯದ ಪದಾಧಿಕಾರಿಗಳು, ಗುರಿಕ್ಕಾರರು ಸಭೆಯಲ್ಲಿ ಭಾಗವಹಿಸಿದರು
ಅಪರಾಹ್ನ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕಾಸರಗೋಡು, ನೀರ್ಚಾಲು ಹಾಗೂ ಗುಂಪೆ ವಲಯಗಳ ಸಭೆಯು ನಡೆಯಿತು. ವಲಯ ಪ್ರಧಾನರು, ಗುರಿಕ್ಕಾರರು ಹಾಗೂ ಶ್ರೀಮಠದ ಶಿಷ್ಯವೃಂದದವರು ಸಭೆಯಲ್ಲಿ ಹಾಜರಿದ್ದರು. ಧ್ವಜಾವತರಣ, ಶಾಂತಿಮಂತ್ರ, ಶಂಖನಾದದೊಂದಿಗೆ ಸಭೆಯು ಮುಕ್ತಾಯವಾಯಿತು.

RELATED ARTICLES  ಮುರ್ಡೇಶ್ವರದ ಉತ್ತರಕೊಪ್ಪದಲ್ಲಿ 5ನೇ ವರ್ಷದ ಪೌರಾಣಿಕ ಯಕ್ಷೋತ್ಸವ – “ಯಕ್ಷಗಾನ ಸಪ್ತಾಹ”