ಕುಮಟಾ: ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ರೊಟೇರಿಯನ್ ಸುನಂದಾ ಪೈ ಅವರು ಮಕ್ಕಳಲ್ಲಿಯ ಪ್ರತಿಭೆ ಬೆಳಗಲು ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ಅವಶ್ಯವಾಗಿದ್ದು, ಇಲ್ಲಿಯ ಶಿಕ್ಷಕ ವರ್ಗದವರು ಅದನ್ನು ಪೂರೈಸುತ್ತಿರುವುದು ಅನುಕರಣೀಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೇಯಾಂಕ ಪಡೆಯುವ ಪ್ರತಿಭಾವಂತರಿಗೆ ಬಹುಮಾನ ನೀಡಲು ಮುಂಗಡವಾಗಿ ಹತ್ತು ಸಾವಿರ ರೂ.ಗಳನ್ನು ಈ ಸಂದರ್ಭದಲ್ಲಿ ಅವರು ಪ್ರೋತ್ಸಾಹ ರೂಪವಾಗಿ ಶಾಲೆಗೆ ನೀಡಿದರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಾಂಸ್ಕøತಿಕ ಸಂಘದಡಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು ತಿದ್ದಿ ತೀಡಿ ತರಬೇತಿ ನೀಡಿ ಪ್ರತಿಭಾ ಸಂಪನ್ನಮಾಡುವ ಪ್ರಕ್ರಿಯೆಯಲ್ಲಿ ಶಿಕ್ಷಕನಾದವನಿಗೆ ದೊರಕುವ ಆನಂದ ಅದ್ವಿತೀಯವಾದುದು ಎಂದರು. 26 ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಸೊಗಸಾಗಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.
ಶಾಲಾ ಮುಖ್ಯಮಂತ್ರಿಗಳಾದ ಸುಮನ್ ಮಡಿವಾಳ ಸ್ವಾಗತಿಸಿದರೆ ಐಶ್ವರ್ಯಾ ಶಾನಭಾಗ ನಿರೂಪಿಸಿದರು. ಶ್ರೀಲಕ್ಷ್ಮೀ ಭಟ್ಟ ವಂದಿಸಿದರು. ವಿದ್ಯಾರ್ಥಿ ಸಂಘ ಮತ್ತು ಮಹಾತ್ಮಾ ಗಾಂಧಿ ಇಂಟರ್ಯಾಕ್ಟ್ ಕ್ಲಬ್ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.