ಕೇವಲ 2 ಕ್ಷೇತ್ರ ಗೆದ್ದ ರಾಜ್ಯದಲ್ಲೇ ಬೆಂಬಲ ಪಡೆದು ಅಧಿಕಾರ ಹಿಡಿದಿದ್ದ ಬಿ.ಜೆ.ಪಿ.ಗೆ ಕರ್ನಾಟಕದಲ್ಲಿ 104 ಸ್ಥಾನಗಳನ್ನು ಗೆದ್ರೂ ಅಧಿಕಾರ ರಚಿಸಲು ಅಡೆತಡೆ ಎದುರಾಗಿದೆ.
ಬಿ.ಜೆ.ಪಿ. ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ, ಸರಳ ಬಹುಮತ ಸಿಕ್ಕಿಲ್ಲ. ಆದರೆ, ದೊಡ್ಡ ಪಕ್ಷವಾಗಿರುವ ತಮಗೆ ಅಧಿಕಾರ ರಚಿಸಲು ಅವಕಾಶ ನೀಡಬೇಕೆಂದು ಬಿ.ಜೆ.ಪಿ. ರಾಜ್ಯಪಾಲರಿಗೆ ಮನವಿ ಮಾಡಿದೆ.
ಇಂದು ಬಿ.ಜೆ.ಪಿ. ಶಾಸಕಾಂಗ ಪಕ್ಷದ ಮೊದಲ ಸಭೆ ನಡೆಯಲಿದ್ದು, ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಿ, ಎಲ್ಲಾ 104 ಶಾಸಕರ ಸಹಿ ಪಡೆದು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗುವುದು.
ಸರ್ಕಾರ ರಚನೆಗೆ ಅವಕಾಶ ನೀಡಿದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸದನದಲ್ಲಿ ಬಹುಮತ ಸಾಬೀತುಪಡಿಸಲು ಚಿಂತನೆ ನಡೆದಿದೆ. ಕೇಂದ್ರ ನಾಯಕರಾದ ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ ಕೂಡ ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.
ದೆಹಲಿಯಿಂದಲೇ ಜೆ.ಡಿ.ಎಸ್. ವರಿಷ್ಠರಾದ ದೇವೇಗೌಡರನ್ನು ಸಂಪರ್ಕಿಸಿ ಮೈತ್ರಿ ಸರ್ಕಾರ ರಚನೆಗೆ ಮಾತುಕತೆ ನಡೆಸಲಾಗಿದೆ. ಆದರೆ, ಸರ್ಕಾರ ರಚನೆಯ ಹಾದಿಯಲ್ಲಿ ಕಾಂಗ್ರೆಸ್ –ಜೆ.ಡಿ.ಎಸ್. ದೂರ ಸಾಗಿರುವ ಹಿನ್ನಲೆಯಲ್ಲಿ ಬಿ.ಜೆ.ಪಿ. ವರಿಷ್ಠರು ಹೊಸ ಕಾರ್ಯತಂತ್ರ ರೂಪಿಸಿದ್ದಾರೆ.
ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷದ ಶಾಸಕರನ್ನು ಸೆಳೆದು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿ.ಜೆ.ಪಿ. ಕಾರ್ಯತಂತ್ರ ರೂಪಿಸಿದೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸಲು ಬಿ.ಜೆ.ಪಿ. ನಾಯಕರು ತೀರ್ಮಾನಿಸಿದ್ದು, ಸಮಯ ಕಡಿಮೆ ಇರುವುದರಿಂದ ನಾಯಕರು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.
1