ಕಾರವಾರ: 34 ವರ್ಷ ಸರ್ಕಾರಿ ಉದ್ಯೋಗಿಯಾಗಿ ಸೇವೆ ಮಾಡಿ ನಿವೃತ್ತಿಯಾದ ನಂತರ ಇವರಿಗೆ ಬರುತ್ತಿರುವ ಪಿಂಚಣಿ 240 ರೂ.!
ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸಿದ ಕಾರವಾರದ ಬಿಣಗಾದ ಗೋವಿಂದ ವೈ. ಮಾಳ್ಸೇಕರ್ 2003 ರಲ್ಲಿ ನಿವೃತ್ತರಾಗಿದ್ದಾರೆ. ಆದರೆ, ಮಹಾಲೆಕ್ಕಪಾಲರು ಅವರ ಸೇವಾ ಅವಧಿಯನ್ನು ಕೇವಲ 16 ವರ್ಷ ಎಂದು ಪರಿಗಣಿಸಿದ್ದರಿಂದ ಅವರಿಗೆ ಇಷ್ಟು ಕಡಿಮೆ ಪಿಂಚಣಿ ಬರುತ್ತಿದೆ. ಇದರಿಂದ ಜೀವನ ನಿರ್ವಹಣೆಗಾಗಿ ಅವರು ಖಾಸಗಿ ಗುತ್ತಿಗೆ ಕಂಪನಿಯೊಂದರಲ್ಲಿ ನೈಟ್ ವಾಚ್ವುನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1969 ರಿಂದ 1986 ರವರೆಗೆ ಗೋವಿಂದ ಮಾಳ್ಸೇಕರ್ ಅವರು ಬೈತಖೋಲ್ನ ಮೀನುಗಾರಿಕೆ ಇಲಾಖೆಯಲ್ಲಿ ಐಸ್ ಮಝುದೂರ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸಿದರು. ನಂತರ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ಅವರು ವರ್ಗಾವಣೆಗೊಂಡರು. 2003 ರಲ್ಲಿ ಅಲ್ಲಿಂದ ನಿವೃತ್ತರಾದರು. ಆದರೆ, ಅವರು ಮೀನುಗಾರಿಕೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅವಧಿಯನ್ನು ಮಾತ್ರ ಪರಿಗಣಿಸಲಾಗಿದೆ. ಈ ಸಂಬಂಧ ಗೋವಿಂದ ಅವರು ಇಲಾಖೆಗೆ ಓಡಾಡಿ ಸೋತು ಹೋಗಿದ್ದಾರೆ. ಮೀನುಗಾರಿಕೆ ಇಲಾಖೆಯಿಂದಲೂ ಗೋವಿಂದ ಪರವಾಗಿ ಪತ್ರ ಬರೆಯಲಾಗಿದೆ. ಆದರೆ, ಮಹಾಲೆಕ್ಕಪಾಲರಿಂದ ಯಾವುದೇ ಪತ್ರ ಬರುತ್ತಿಲ್ಲ. ನನ್ನ ಜತೆಗೇ ಕಾರ್ಯನಿರ್ವಹಿಸಿ ನಿವೃತ್ತನಾದ ಸಿಬ್ಬಂದಿಯೊಬ್ಬನಿಗೆ 6 ಸಾವಿರ ಪಿಂಚಣಿ ಬರುತ್ತದೆ. ನನ್ನ ಪಿಂಚಣಿ ಮಾತ್ರ ಇಷ್ಟು ಕಡಿಮೆ ಎಂದು ಗೋವಿಂದ ತಮ್ಮ ಗೋಳು ತೋಡಿಕೊಳ್ಳುತ್ತಾರೆ