ಕಾರವಾರ : ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟ. ಸತ್ಯದ ಬೆನ್ನು ಹತ್ತಿ ವರದಿ ಮಾಡುವುದು ಅಪಾಯಕಾರಿ ಆದರೂ ತನಿಖಾ ಪತ್ರಿಕೋದ್ಯಮ ಜೀವನೋತ್ಸಾಹ ತುಂಬುತ್ತದೆ. ಪ್ರತಿವಾರ ಹೊಸತನ ಕೊಡುವ ಕವರ್ ಸ್ಟೋರಿ ತನಿಖಾ ವರದಿಗಳು ನನ್ನನ್ನು ಗಟ್ಟಿಗೊಳಿಸಿದವು. ಸ್ವಂತ ಬದುಕನ್ನು ಸ್ವಲ್ಪ ಮಟ್ಟಿಗೆ ತ್ಯಾಗ ಮಾಡಿ ಸತ್ಯದ ಹುಡುಕಾಟವನ್ನು ಜನ ಸಾಮಾನ್ಯರಿಗೆ ಮಾಡಬೇಕಾಗುತ್ತದೆ ಎಂದು ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಭಾಜರಾದ ವಿಜಯಲಕ್ಷ್ಮಿ ಶಿಬರೂರು ಅಭಿಪ್ರಾಯಪಟ್ಟರು.

ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಹಾಗೂ ವಾರ್ತಾ ಇಲಾಖೆಯ ಸಹಯೋಗದಲ್ಲಿ ಕಾರವಾರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರಾಮಾಣಿಕತೆ ಎಂಬುದನ್ನೇ ಜನ ಅನುಮಾನದಿಂದ ನೋಡುವಂತಾಗಿದೆ. ಎಲ್ಲಾ ಕಡೆ ಎಲ್ಲಾ ರಂಗಗಳಲ್ಲಿ ಭ್ರಷ್ಟಾಚಾರ ತುಂಬಿದೆ. ಇವತ್ತು ಸತ್ಯದ ಬೆನ್ನು ಹತ್ತಿ ಹೋಗುವ ಪತ್ರಕರ್ತರನ್ನು ಅನುಮಾನದಿಂದ ನೋಡುವಂತಾಗಿದೆ, ಕೆಲ ರಾಜಕೀಯ ಆಮಿಷಗಳಿಗೆ ಕೆಲವೇ ಪತ್ರಕರ್ತರು ಬಲಿಯಾಗುವುದರಿಂದ ಇಡೀ ಕ್ಷೇತ್ರವನ್ನು ಅನುಮಾನದಿಂದ ನೋಡಿಕೊಳ್ಳುವಂತಾಗಿದೆ.

RELATED ARTICLES  ಸತತ ಸೋಲಿನ ಬಳಿಕ ಐದನೇ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ 'ನಿರ್ಭಯ್'!

ಪತ್ರಿಕೋದ್ಯಮ ಬಂಡವಾಳ ಶಾಹಿ ಮತ್ತು ರಾಜಕೀಯ ಪಕ್ಷಗಳ ಹಿಡಿತದಲ್ಲಿದೆ. ಪ್ರಾಮಾಣಿಕ ವರದಿಗಾರಿಕೆ ಮತ್ತು ಸತ್ಯ ಹೇಳುವುದು ಕಷ್ಟವಾಗುತ್ತಿದೆ. ಈ ಸ್ಥಿತಿ ಯಾಕೆ ಬಂತು, ಅಮಿಷದ ಬೋನಿನಲ್ಲಿ ಬೀಳುವಂತಹ ಸನ್ನಿವೇಶ ಯಾಕೆ ಬಂತು ಎಂಬುದನ್ನು ಆತ್ಮಾವಾಲೋಕನ ಮಾಡಿಕೊಳ್ಳಬೇಕಿದೆ. ಅದು ಸಾರ್ವಜನಿಕರ ಎದುರೇ ನಾವು ಪ್ರಶ್ನಿಸಿಕೊಳ್ಳಬೇಕಿದೆ. ಇದು ಪ್ರಾಮಾಣಿಕರಿಗೆ ಮಾತ್ರ ಸಾಧ್ಯ, ಸತ್ಯದ ಬೆನ್ನು ಹತ್ತುವುದಿದ್ದರೆ ಪತ್ರಿಕೋದ್ಯಮಕ್ಕೆ ಬನ್ನಿ. ಜನ ಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸಿ ಎಂದು ವಿಜಯ ಲಕ್ಷ್ಮಿ ಶಿಬರೂರು ಅಭಿಪ್ರಾಯಪಟ್ಟರು,

ಸಭಿಕರು ಕೇಳಿದ ಪ್ರಶ್ನೆಗಳಿಗೆ ಅವರು ನೇರ ಉತ್ತರ ನೀಡಿದರು. ಪಾಕಿಸ್ತಾನ ಪ್ರವಾಸ ತಮ್ಮ ಪ್ರವಾಸ ಮರೆಯಲಾರದ ಅನುಭವ, ಅಲ್ಲಿನ ಜನ ನಮ್ಮಂತೆಯೇ ಭಾವನೆಯುಳ್ಳವರು, ಅವರು ಸಹ ನಮ್ಮಂತೆ ಕಷ್ಟ ಸುಖ, ಪ್ರೀತಿ ಭಾವನೆ ಹೊಂದಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಗಡಿಗಳು ಬಲವಾಗಿವೆ. ಆದರೆ ಅಲ್ಲಿನ ಜನ ಭಯೋತ್ಪಾದನೆಯ ಆತಂಕವನ್ನು ಹೆಚ್ಚಾಗಿ ಅನುಭವಿಸುತ್ತಿದ್ದಾರೆ ಎಂದರು, ಹೊಗನೇಕಲ್, ಅಕ್ರಮ ಚಿಪ್ಪಿ ಗಣಿಗಾರಿಕೆ ನೆನಪುಗಳನ್ನು ಸ್ಮರಿಸಿಕೊಂಡರು, ೩೦೦ ತನಿಖಾ ವರದಿಗಳಲ್ಲಿ ಉತ್ತರ ಕನ್ನಡ ತನಿಖಾ ವರದಿ ಮರೆಯಲಾರದ್ದು ಎಂದರು.

RELATED ARTICLES  ಅಯೋಗ್ಯ, ತಲೆತಿರುಕ, ನಾಚಿಕೆ ಇಲ್ಲದ ಸಿಎಂ : ಬಿಎಸ್ ವೈ ವಾಗ್ದಾಳಿ

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಶಾರದಾ ಶೆಟ್ಟಿ ಪತ್ರಿಕೋದ್ಯಮ ತನ್ನ ನೈತಿಕತೆ ಮೀರದೇ ಸತ್ಯದ ವರದಿಗಳನ್ನು ಮಾಡಬೇಕು, ಜನರ ನಂಬಿಕೆ ಕಳೆದುಕೊಳ್ಳಬಾರದು ಎಂದರು.
ಅಭಿವೃದ್ಧಿ ಕೆಲಸಗಳಿಗೆ ಪತ್ರಕರ್ತರು ಪ್ರೋತ್ಸಾಹಿಸಬೇಕು ಎಂದರು.
ಉದ್ಯಮಿ ರೂಪಾಲಿ ನಾಯ್ಕ ಮಾತನಾಡಿ ಪತ್ರಿಕಾ ರಂಗ ಜನರ ಸಮಸ್ಯೆಗೆ ಸ್ಪಂದಿಸಬೇಕು. ವಿಜಯ ಲಕ್ಷ್ಮಿ ಶಿಬರೂರು ಅಂಥವರು ಯುವತಿಯರಿಗೆ ಮಾದರಿ ಎಂದರು.

ಅನುಕಳಸ,ಕಾಲೇಜು ಪ್ರಿನ್ಸಿಪಾಲರಾದ ಶಿವಾನಂದ ನಾಯಕ, ವಿನಾಯಕ ಗಂಗೊಳ್ಳಿ ಇದ್ದರು. ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಪತ್ರಿಕೋದ್ಯಮದ ಇತಿಹಾಸ ಮತ್ತು ಇಂದಿನ ಪತ್ರಿಕೋದ್ಯಮದ ಸ್ಥಿತಿಗತಿ ಕುರಿತು ಉಪನ್ಯಾಸ ನೀಡಿದರು.

ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ಕಡತೋಕ ಮಂಜು ಪ್ರಸ್ತಾವಿಕವಾಗಿ ಮಾತನಾಡಿ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಯನ್ನು ಯಾಕೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಮರೆತುಹೋಗಿದ್ದ ಪತ್ರಿಕೋದ್ಯಮದ ಜನಕನನ್ನು ನಾಡಿಗೆ ನೆನಪಿಸಿದ್ದೇವೆ ಎಂದರು.