ಭಟ್ಕಳ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಹಿತ ಮಳೆಗೆ ಗುರುವಾರದಂದು ತಡರಾತ್ರಿ ಇಲ್ಲಿನ ಜಾಲಿ ಪ.ಪಂ ವ್ಯಾಪ್ತಿಯ ಮನೆ ಮೇಲೆ ತೆಂಗಿನ ಮರಬಿದ್ದು ಹಾನಿ ಸಂಭವಿಸಿದ್ದು ಘಟನೆಯಲ್ಲಿ ಮನೆಯ ಸದಸ್ಯರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ನಗರದ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಾದೇವಿ ಗೋಯ್ದಯ್ಯ ನಾಯ್ಕ ಎನ್ನುವವರ ಮನೆ ಮೇಲೆ ತೆಂಗಿನ ಮರಬಿದ್ದಿರುವುದಾಗಿದೆ. ತೆಂಗಿನ ಮರ ರಾತ್ರಿ ಸಮಯಕ್ಕೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಸದಸ್ಯರಿಗೆ ಗಾಯಗಳಾಗಿವೆ. ಏನಾಯಿತು ಎನ್ನುವಷ್ಟರಲ್ಲಿ ಮನೆ ಮೇಲೆತೆಂಗಿನ ಮರ ಬಿದ್ದಿದ್ದು, ಮನೆ ಮಂದಿ ಭಯಭೀತರಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮಾದೇವಿ ಗೋಯ್ದಯ್ಯ ನಾಯ್ಕ ಎನ್ನುವವರ ತಲೆಗೆ ಪೆಟ್ಟು ಬಿದ್ದಿದ್ದು, ತಕ್ಷಣಕ್ಕೆ ಸ್ಥಳಿಯರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಇದೇ ವೇಳೆ ಮನೆಯ ಇತರ ಸದಸ್ಯರಾದ ಮಾಸ್ತಮ್ಮ ಗೋಯ್ದಯ್ಯ ನಾಯ್ಕ, ಪದ್ಮಾವತಿ ಗೋಯ್ದಯ್ಯ ನಾಯ್ಕ ಇವರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಮರ ಬಿದ್ದು ಸುಮಾರು 15,000 ರೂ. ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಇನ್ನು ಇದೇ ವೇಳೆ ಇಲ್ಲಿನ ಹೆಬಳೆ ಪಂಚಾಯತಿ ವ್ಯಾಪ್ತಿಯ ನಾಗಮ್ಮ ಜಟ್ಟಪ್ಪ ನಾಯ್ಕ ಎನ್ನುವವರ ಮನೆಗೂ ಸಹ ಹಾನಿಯಾಗಿದ್ದು 15,000 ರೂ ಹಾನಿ ಸಂಭವಿಸಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.