ಎಮ್ ಎಸ್ ಶೋಭಿತ್ ಮೂಡ್ಕಣಿ

ಐತಿಹಾಸಿಕ ಪ್ರಸಿದ್ಧ ಕುಮಾರರಾಮನ ಪಟ್ಟಾಭಿಷೇಕದ ಸವಿನೆನಪಿಗಾಗಿ ಪ್ರತಿವರ್ಷ ಮೇ 21 ರಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅನಿಲಗೋಡ ಗ್ರಾಮದಲ್ಲಿ ಜರುಗುತ್ತದೆ.

ಇತಿಹಾಸ:- ಸುಮಾರು 500 ವರ್ಷಗಳ ಇತಿಹಾಸವುಳ್ಳ ಶ್ರೀಕುಮಾರರಾಮ ಹಾಗೂ ಮಹಾಸತಿ ದೇವಸ್ಥಾನವು ಸುತ್ತಮುತ್ತ ಗ್ರಾಮಗಳ ಆರಾಧ್ಯದೈವವಾಗಿದೆ. ಇಲ್ಲಿನ ದೇವತೆಗಳಾದ ಶ್ರೀಕಾಳಿಕಾಂಬ, ಶ್ರೀಕುಮಾರರಾಮ, ಮಾಳಮಾಸ್ತಿ, ನಾಗಮಾಸ್ತಿ, ಹೊನ್ನಮಾಸ್ತಿ ಮತ್ತು ಕೆಂಡದಮಾಸ್ತಿ ದೇವರು ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ.

ಅನಿಲಗೋಡ ಕಳ್ಳರು:- ಕಾಳಿಕಾದೇವಿಯ ವರಪ್ರಸಾದದಿಂದ ಅಪ್ರತಿಮ ಶೂರನಾಗಿ ಕುಮಾರರಾಮನು ವಿರೋಧಿಗಳ ಸೈನ್ಯವನ್ನು ಹಿಮ್ಮೆಟ್ಟಿಸಿ ನಾಡಿಗೆ ಜಯ ತಂದುಕೊಡುತ್ತಾನೆ‌. ಕುಮಾರರಾಮನ ಅವಸಾನದ ನಂತರ ಆತನ ಶಿರವನ್ನು ಅನಿಲಗೋಡದಲ್ಲಿ ತಂದು ಪ್ರತಿಷ್ಟಾಪಿಸಲಾಗಿದೆ‌‌. ಕುಮಾರರಾಮನ ದೇಹದ ಉಳಿದ ಅವಶೇಷಗಳನ್ನು ಹುಡುಕಿ ತರಲು ಕಾಳಿಕಾದೇವಿಯು ತನ್ನ ಗಣಗಳನ್ನು ನಾಲ್ಕೂ ದಿಕ್ಕಿನಲ್ಲಿ ಕಳಿಸುತ್ತಾಳೆ. ಅವರು ಊರೂರು ತಿರುಗಿ ಹುಡುಕುತ್ತಾರೆ ಎಂಬ ಪ್ರತೀತಿಯಿದೆ. ಅದೇ ಪರಂಪರೆ ಅನುಸರಿಸಿ ಇಂದು ಅನಿಲಗೋಡ ಕಳ್ಳರೆಂದೇ ಕರೆಯಲಾಗುವ ಹರಕೆ ಹೊತ್ತ ಭಕ್ತರು ವಿಶೇಷ ಅಲಂಕಾರಗಳಿಂದ ಶೃಂಗರಿಸಿಕೊಂಡು ಊರೂರು ಅಳೆಯುತ್ತಾರೆ. ಪ್ರತಿವರ್ಷ ಸುಮಾರು 200 ರಿಂದ 300 ಹರಕೆದಾರರು ಸಂಪ್ರದಾಯದಂತೆ ಮೈಕೈಗೆ ಹೂವಿನ ಅಲಂಕಾರ ಮಾಡಿಕೊಂಡು ” ಹೋ……ಕುಲುಲೂ….” ಎಂದು ಕೂಗುತ್ತಾ ಮನೆಮನೆಗೆ ತೆರಳಿ ಕಾಣಿಕೆಗಳನ್ನು ಸಂಗ್ರಹಿಸುತ್ತಾರೆ. ತಮಗೆ ದೊರೆತ ಅಕ್ಕಿ, ತೆಂಗಿನಕಾಯಿ ಮತ್ತು ಹಣದಲ್ಲಿ ಒಂದಷ್ಟು ಭಾಗವನ್ನು ದೇವರಿಗೆ ನೀಡಿ ಉಳಿದದ್ದನ್ನು  ತಾವಿಟ್ಟುಕೊಳ್ಳುತ್ತಾರೆ.

RELATED ARTICLES  ಗೋಕರ್ಣದ ಕಡಲಿನಲ್ಲಿ ಈಜಲು ತೆರಳಿದ ಈರ್ವರ ಸಾವು: ಮನೆಯವರ ಜೊತೆ ಈಜಲು ತೆರಳಿದಾಗ ಅವಾಂತರ

ಶೂಲದ ಕಂಬ :- ಹಬ್ಬದ ದಿನ ದೇವಸ್ಥಾನದ ಮುಂಭಾಗದಲ್ಲಿ ಎಣ್ಣೆ ಸವರಿದ 36 ಅಡಿ ಎತ್ತರದ ಬೃಹತ್ ಶೂಲದ ಕಂಬವನ್ನು ನಿಲ್ಲಿಸಲಾಗುತ್ತದೆ.      ” ಅನಿಲಗೋಡ ಕಳ್ಳರು ” ಎಂದು ಕರೆಯಲಾಗುವ ಹರಕೆ ಹೊತ್ತ ಭಕ್ತರು ಎಣ್ಣೆ ಸವರಿದ ಈ ಕಂಬವನ್ನು ಏರಿ ಕಂಬದ ತುದಿಯಲ್ಲಿ ಕಟ್ಟಲಾಗಿರುವ ಬಾಳೆಹಣ್ಣಿನ ಗೊನೆಯನ್ನು ಕೀಳಲು ಪೈಪೋಟಿ ನಡೆಸುತ್ತಾರೆ.

RELATED ARTICLES  ವೀಕೆಂಡ್ ಕರ್ಫ್ಯೂ , ಶನಿವಾರ ಶಾಲೆಗಳಿಗೆ ರಜೆ..!

ಮೊದಲು ಕಂಬದ ತುದಿ ಏರಿದವರಿಗೆ ದೇವರು ಕಾಣಿಸುತ್ತಾನೆ ಎಂಬ ನಂಬಿಕೆಯೂ ಇದೆ. ಮುಟ್ಟಿದರೆ ಜಾರುವ ಕಂಬವನ್ನು ಏರಲು ನೂರಾರು ಕಳ್ಳರು ಹವಣಿಸುತ್ತಿದ್ದಾಗ ಅವರ ಮಧ್ಯ ಅನುಭವಿ ಕಸುಬುದಾರರು ಸರಸರನೇ ಕಂಬವನ್ನೇರಿ ಕಂಬದ ತುದಿಯಲ್ಲಿದ್ದ ಬಾಳೆಹಣ್ಣುಗಳನ್ನು ಕಿತ್ತು ನೆರೆದ ಸಾವಿರಾರು ಜನರತ್ತ ಎಸೆಯುತ್ತಾರೆ.

ಪ್ರತಿವರ್ಷ ಮೇ 21 ರಂದು ಸಾವಿರಾರು ಜನರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತದೆ‌. 22 ರಂದು ಪಾನಕ ಪೂಜೆ ಹಾಗೂ ಭಕ್ತರ ಹರಕೆ ಪೂಜೆಗಳು ಸಲ್ಲಿಸಲಾಗುತ್ತದೆ. 21 ರಂದು ಶ್ರೀದೇವರು ಅನಿಲಗೋಡ ಹಾಗೂ ಸುತ್ತಮುತ್ತಲಿನ ಬೇರಂಕಿ, ಹಿನ್ನೂರು, ಕೊಡಾಣಿ ಮತ್ತಿತರ ಗ್ರಾಮಗಳಲ್ಲಿ ಸಂಚಾರ ನಡೆಸಿ 27 ರಂದು ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ.