ಯಲ್ಲಾಪುರ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದು, ಮಧ್ಯಾಹ್ನದ ನಂತರ ಕೆಲ ಪ್ರದೇಶದಲ್ಲಿ ವೋಲ್ಟೇಜ್ ಏರಿಳಿತವಾಗುತ್ತಿದೆ.
ಪಟ್ಟಣ ವ್ಯಾಪ್ತಿಯ ಸಬಗೇರಿ, ಮಂಜುನಾಥನಗರ, ವಿನಾಯಕ ಕಾಲೊನಿ, ಮಾರುಕಟ್ಟೆ ಪ್ರದೇಶ, ಬಸವೇಶ್ವರ ವೃತ್ತದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿರುವ ಅಂಗಡಿ–ಮುಂಗಟ್ಟುಗಳ ವ್ಯಾಪಾರಸ್ಥರು ಹಾಗೂ ಹೋಟೆಲ್ ಉದ್ಯಮಿಗಳು ವಿದ್ಯುತ್ ಸಮಸ್ಯೆಯಿಂದ ಪರದಾಡುವಂತಾಗಿದೆ. ಈ ಬಗ್ಗೆ ಗ್ರಾಹಕರು ಪಟ್ಟಣದ ಹೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮೇನ್ ಲೈನ್ ಸಮಸ್ಯೆಯಿಂದ ಈ ರೀತಿಯಾಗುತ್ತಿದೆ ಎಂದು ಸಬೂಬು ಹೇಳುತ್ತಿದ್ದಾರೆಯೇ ಹೊರತು, ಅದನ್ನು ದುರಸ್ತಿ ಮಾಡುವ ಬಗ್ಗೆ ಲಕ್ಷ್ಯವಹಿಸುತ್ತಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣ ಹಾಗೂ ತಾಲ್ಲೂಕಿನ ನಾನಾ ಕಡೆಗಳಲ್ಲಿ ಕಳ್ಳತನ ಸಂಭವಿಸುತ್ತಿದೆ. ಅನಿಯಂತ್ರಿತ ವಿದ್ಯುತ್ ಕಡಿತ ಕಳ್ಳತನಕ್ಕೆ ಇಂಬು ನೀಡುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಸಮಯದಲ್ಲಿ ಅವಘಡವಾದರೆ ತಕ್ಷಣ ಅದಕ್ಕೆ ಸ್ಪಂದಿಸಲು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತಹ ಯೋಜನೆಯನ್ನು ಸರ್ಕಾರ ಜಾರಿಗೆ ತಂದರೂ, ಅಧಿಕಾರಿಗಳು ಗ್ರಾಹಕರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ಉದಾಹರಣೆಯಂಬಂತೆ ವಾರದ ಹಿಂದೆ ಪಟ್ಟಣದ ಸಬಗೇರಿ ವಾರ್ಡ್‍ನಲ್ಲಿ ಭಾರಿ ಗಾತ್ರದ ಮರವೊಂದು ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಬಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿತ್ತು. ಆದರೆ ವಿದ್ಯುತ್ ಲೈನ್ ತಪ್ಪಿಸಿ ರಸ್ತೆ ಮೇಲೆಯೇ ಲೈನ್‍ಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಟ್ಟಿರುವುದು ಸಹ ಗ್ರಾಹಕರ ಬೇಸರಕ್ಕೆ ಕಾರಣವಾಗಿತ್ತು.
ಮಳೆಗಾಲ ಪ್ರಾರಂಭವಾಗುವ ಒಂದೆರಡು ತಿಂಗಳ ಮೊದಲು ಪ್ರತಿಯೊಂದು ವಿಭಾಗದಲ್ಲಿ ವಿದ್ಯುತ್ ಲೈನ್ ಹಾದು ಹೋಗಿರುವ ಜಾಗದಲ್ಲಿರುವ ಸಣ್ಣ ಮರ-ಗಿಡಗಳನ್ನು ಕತ್ತರಿಸುವುದಕ್ಕೆ ಗುತ್ತಿಗೆ ನೀಡಲಾಗುತ್ತದೆ. ಆದರೆ ಗುತ್ತಿಗೆದಾರರು ಲೈನ್‍ಗೆ ತಾಕುವ ಗಿಡಗಂಟಿಗಳನ್ನು ಸರಿಯಾಗಿ ಕತ್ತರಿಸದೇ ಲಾಭದ ಆಸೆಗಾಗಿ ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಸರ್ಕಾರ ಗುತ್ತಿಗೆ ನೀಡಿದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಣ ಖರ್ಚು ಮಾಡಿ ಉಳಿದ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ. ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮೇನ್ ಲೈನ್‍ನಲ್ಲಿ ಟ್ರಿಪ್ ಆಗುವುದರಿಂದ ವಿದ್ಯುತ್ ಏರಿಳಿತವಾಗುತ್ತಿದೆ ಎಂದು ತಮಗೆ ಸಬೂಬು ಹೇಳುತ್ತಾರೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಾರೆ.