ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಉಪಮುಖ್ಯಮಂತ್ರಿ ಸ್ಥಾನವನ್ನು ಪರಮೇಶ್ವರ್ ಅವರು ಅಲಂಕರಿಸಿದ್ದಾರೆ, ಇನ್ನೀಗ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಯಾವ ಸ್ಥಾನ ದೊರೆಯಲಿದೆ ಎಂಬುದರ ಕುರಿತು ಜನತೆಯಲ್ಲಿ ಕುತೂಹಲಗಳು ಮೂಡತೊಡಗಿವೆ.
ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಶಿವಕುಮಾರ್ ನಿನ್ನೆಯೇ ಪ್ರಮಾಣವಚನ ಸ್ವೀಕಾರ ಮಾಡಲು ಬಯಸಿದ್ದರು. ಹೀಗೊಂದು ಬೇಡಿಕೆ ಕೂಡ ಹೈಕಮಾಂಡ್ ಮುಂದೆ ಇಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ, ಒಂದೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವ ನಿರ್ಧಾರ ಮಾಡಿದ್ದ ಕಾಂಗ್ರೆಸ್ ನಾಯಕರು ಶಿವಕುಮಾರ್ ಅವರ ಬೇಡಿಕೆಯನ್ನು ಈಡೇರಿಸಿರಲಿಲ್ಲ.
ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ಶಿವಕುಮಾರ್ ಅವರು, ಮಾಧ್ಯಮಗಳ ಮುಂದೆ ಮಾತನಾಡಿ ನಾನಿಲ್ಲಿ ಫುಟ್’ಬಾಲ್ ಆಡಲು ಬಂದಿಲ್ಲ ಚದುರಂಗ ಆಡುತ್ತೇನೆಂದು ಹೇಳುವ ಮೂಲಕ ಸಿಟ್ಟನ್ನು ಹೊರಹಾಕಿದ್ದರು.
ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಿಕೆ ಶಿವಕುಮಾರ್ ಅವರು, ಪಕ್ಷದ ಶಾಸಕರನ್ನು ಬಿಗಿ ಬಂದೋಬಸ್ತ್’ನಲ್ಲಿ ಇರಿಸಿಕೊಳ್ಳುವ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದರು.