ಕಾರವಾರ:ಮಳೆಗಾಲದ ಪ್ರಾರಂಭದಲ್ಲಿ ಸಮುದ್ರದ ಅಲೆಗಳ ಏರಿಳಿತ ಹೆಚ್ಚುತ್ತಿದೆ. ಅದರಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು ಕಾರವಾರದಲ್ಲಿ ಅತಹ ಒಂದು ಘಟನೆ ಇಂದು ಸಂಭವಿಸಿದೆ.
ಅರಬ್ಬಿ ಸಮುದ್ರದಲ್ಲಿ ತಮಿಳುನಾಡು ಮೂಲದ ಮೀನುಗಾರರ ಎರಡು ಬೋಟ್‌ಗಳು ಕಾರವಾರದಿಂದ ೨೧ ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿವೆ.
ಎಂಜಲ್-1, ಎಂಜಲ್-2 ಎಂಬ ಹೆಸರಿನ ಬೋಟ್‌ಗಳು ಸಮುದ್ರದಲ್ಲಿ ಮುಳುಗಿವೆ. ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ತಮಿಳುನಾಡಿಗೆ ತೆರೆಳುತ್ತಿದ್ದ ಬೋಟ್‌ಗಳು ನೀರಿನಲ್ಲಿ ಮುಳುಗಿವೆ. ಸಮುದ್ರದ ಅಲೆಯ ಅಬ್ಬರಕ್ಕೆ ಬೋಟ್ ನಿಯಂತ್ರಣ ಕಳೆದುಕೊಂಡು ಮುಳುಗಿದೆ ಎನ್ನಲಾಗ್ತಿದೆ. ಒಟ್ಟು 13 ಮೀನುಗಾರರಲ್ಲಿ 11 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯಿಂದ ಮಾಹಿತಿ ದೊರೆತಿದೆ.
ಬೆಳಿಗ್ಗೆ 6.30 ರ ಸುಮಾರಿಗೆ ಬೋಟುಗಳು ಅಪಾಯಕ್ಕೀಡಾದ ಕುರಿತು ಮಾಹಿತಿ ಸಿಕ್ಕಿತು. ಕೂಡಲೇ ತಟ ರಕ್ಷಕ ದಳಕ್ಕೆ ತಿಳಿಸಿ, ಅವರು ಪೆಟ್ರೋಲಿಂಗ್ ಬೋಟ್ನ ಮೂಲಕ ಸ್ಥಳಕ್ಕೆ ತೆರಳಿ ಮುಳುಗಡೆಯಾಗಿದ್ದ ಬೋಟ್ನಲ್ಲಿದ್ದ 11 ಮಂದಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ಆದರೆ ಇಬ್ಬರು ನಾಪತ್ತೆಯಾಗಿದ್ದಾರೆ. ಆ ಇಬ್ಬರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು ಹಾಗೂ ಗೋವಾದಿಂದ ತಟ ರಕ್ಷಕ ದಳವನ್ನು ಕರೆಯಿಸಿದ್ದೇವೆ. ಅವರು ಕೂಡ ಈ ರಕ್ಷಣಾ ಕಾರ್ಯದಲ್ಲಿ ಸಹಕರಿಸಲಿದ್ದಾರೆ. ಸುರಕ್ಷಿತವಾಗಿ ಮೀನುಗಾರರನ್ನು ದಡಕ್ಕೆ ತರಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂತೋಷ ಕೊಪ್ಪದ್ ತಿಳಿಸಿದ್ದಾರೆ.