ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಾಲುಮರದ ತಿಮ್ಮಕ್ಕನ ಸಾವಿನ ಸುದ್ದಿ ಹಬ್ಬಿಸಿದ್ದ ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಸೇರಿದ್ದ ಸಾಲುಮರದ ತಿಮ್ಮಕ್ಕ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೈಸೂರು ಮೂಲದ ಪ್ರದೀಪ್ ಗೌಡ ಎಂದು ಗುರುತಿಸಲಾಗಿದ್ದು. ಈತ ಕೆ.ಆರ್.ನಗರದ ಹರದನಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಪ್ರದೀಪ್ಗೌಡ ವೋಲಾ ಕ್ಯಾಬ್ ಡ್ರೈವರ್. ಮೇ 25ರಂದು ಫೇಸ್ಬುಕ್ನಲ್ಲಿ ತಿಮ್ಮಕ್ಕನವರ ಫೋಟೋ ಎಡಿಟ್ ಮಾಡಿ, ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂದು ಸ್ನೇಹಲೋಕ ಫೇಸ್ ಬುಕ್ ಗ್ರೂಪ್ ಗೆ ಅಪ್ ಲೋಡ್ ಮಾಡಿ ವಿಕೃತಿ ಮೆರೆದಿದ್ದ. ಬಳಿಕ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಈ ವಿಚಾರ ತಿಮ್ಮಕ್ಕನ ಸಾಕು ಮಗ ಉಮೇಶ್ ವನಸಿರಿ ತಿಳಿದು ಅವರು ಸುದ್ದಿಗೋಷ್ಠಿ ನಡೆಸಿ ತಿಮ್ಮಕ್ಕ ಸತ್ತಿಲ್ಲ. ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದರು. ಮಾರನೆಯ ದಿನವೇ ತಿಮ್ಮಕ್ಕು ಮತ್ತು ಉಮೇಶ್ ವನಸಿರಿ ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಸುಳ್ಳು ವದಂತಿ ವಿರುದ್ಧ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇದೀಗ ವದಂತಿ ಹಬ್ಬಿಸಿದ್ದ ಆರೋಪಿ ಪ್ರದೀಪ್ ಗೌಡನನ್ನು ಬಂಧಿಸಿದ್ದಾರೆ.