ಕುಮಟಾ : ಕಳೆದ ವಾರದಿಂದ ಜಿಲ್ಲೆಯ ಎಲ್ಲೆಡೆ ಮಳೆಯಾಗುತ್ತಿದ್ದು, ಹದ ಮಳೆ ಬಿದ್ದಿದೆ. ಕೃಷಿಕರು ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ.ಮುಂಗಾರು ನಿಧಾನವಾಗಿ ಕಾಲಿಡುತ್ತಿದ್ದಂತೆಯೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳ ತೊಡಗಿದ್ದು ಅನ್ನದಾತ ತನ್ನ ನಿಷ್ಟೆಯ ಕಾಯಕ ಪ್ರಾರಂಭಿಸಿದ್ದಾನೆ.

ಮೇನಲ್ಲಿ ತಾಲೂಕಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಕಾಫಿ, ಮೆಣಸು, ಅಡಿಕೆ, ಏಲಕ್ಕಿ ಸೇರಿದಂತೆ ಈ ಭಾಗದ ಎಲ್ಲಾ ಬೆಳೆಗಳಿಗೂ ಅನುಕೂಲವಾಗಿದೆ. ಅಲ್ಲದೆ ಬೇಸಿಗೆಯಲ್ಲಿ ಈ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್‌, ರಸಗೊಬ್ಬರ ಒದಗಿಸಲು ಮತ್ತು ಇತರೆ ಅಗತ್ಯ ಕೆಲಸ ಕಾರ‍್ಯಗಳನ್ನು ಮಾಡಲು ಕೃಷಿಕರಿಗೆ ಅನುಕೂಲ ಮಾಡಿಕೊಟ್ಟಿದೆ.

RELATED ARTICLES  ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು.

ಹೊಲಗಳನ್ನು ಹರಗುವ ಮತ್ತು ಸ್ವತ್ಛಗೊಳಿಸುವ ಕ್ರಿಯೆಯಲ್ಲಿ ತೊಡಗಿರುವ ರೈತ, ಬೀಜ, ಗೊಬ್ಬರಗಳನ್ನು ಸಂಗ್ರಹಿಸುತ್ತಿದ್ದಾನೆ. ಮುಂಗಾರು ಆರಂಭವಾಗುವ ವೇಳೆಗೆ ಜಿಲ್ಲೆಯ ಬಯಲು ಸೀಮೆಯ ಭೂಮಿ ಹದವಾಗಿದ್ದರೆ, ಕರಾವಳಿಯಲ್ಲಿ ಗದ್ದೆಗಳನ್ನು ಸಹ ಭತ್ತದ ಕೃಷಿಗೆ ಬೇಕಾಗುವಂತೆ ಸಜ್ಜು ಮಾಡಲಾಗುತ್ತಿದೆ. ಭತ್ತದ ಸಸಿ ಬೆಳೆಸಲು ಮಡಿ ಮಾಡಿಕೊಳ್ಳುವತ್ತ ಕರಾವಳಿ ಕೃಷಿಕರು ನಿರತರಾಗಿದ್ದಾರೆ. ಕೃಷಿ ಇಲಾಖೆ ಸಹ ರೈತರಿಗೆ ಬೇಕಾಗುವ ಬೀಜ ಗೊಬ್ಬರ ಪೂರೈಸಲು ಸಜ್ಜಾಗಿದೆ.ರಸಗೊಬ್ಬರವನ್ನು ಸಹ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಪೂರೈಕೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 158 ಸಾವಿರ ಹೆಕ್ಟೇರ್‌ ಭೂಮಿ ಬಿತ್ತನೆಗಿದ್ದು, ಇದರಲ್ಲಿ 65 ಸಾವಿರ ಹೆಕ್ಟೇರ್‌ ಭತ್ತ ಬೆಳೆಗೆ ಮೀಸಲಾಗಿದೆ. ಭತ್ತ ಸಸಿ ಹಚ್ಚುವ ಕ್ರಿಯೆ ಜೂನ್‌ ಅಂತ್ಯ ಮತ್ತು ಜುಲೈ ಆರಂಭಕ್ಕೆ ಕರಾವಳಿಯಲ್ಲಿ ಆರಂಭವಾದರೆ, ಜೊಯಿಡಾದಲ್ಲಿ ಆಗಸ್ಟ್‌ ವೇಳೆಗೆ ಭತ್ತ ಸಸಿಗಳನ್ನು ನೆಡಲಾಗುತ್ತದೆ. ಜಿಲ್ಲೆಯಲ್ಲಿ ಈ ಸಲ 22 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆಯಲು ಗುರಿ ಹೊಂದಲಾಗಿದೆ. ಕಬ್ಬು ಬೆಳೆಗೆ 6500 ಹೆಕ್ಟೇರ್‌ ಭೂಮಿ ಮೀಸಲಿದೆ. ಹತ್ತಿಯನ್ನು 1500 ಹೆಕ್ಟೇರ್‌ ಭೂಮಿಯಲ್ಲಿ ಬೆಳೆಯಲಾಗುತ್ತಿದ್ದು, ಸರಿಯಾದ ಬೆಲೆ ಸಿಗದ ಕಾರಣ, ಹೆಚ್ಚು ಕೀಟ ನಾಶಕ ಬಯಸುವ ಹತ್ತಿ ಬೆಳೆಯಿಂದ ರೈತ ನಿಧಾನಕ್ಕೆ ದೂರ ಸರಿಯುತ್ತಿದ್ದಾನೆ.

RELATED ARTICLES  ಶಿರಸಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಶಶಿಭೂಷಣ ಹೆಗಡೆಯವರಿಗೆ ಇನ್ನಷ್ಟು ಬಲ.