ಅತಿಯಾಗಿ ತಿನ್ನುವಂತಹ ಪರಿಸ್ಥಿತಿಯನ್ನು ತಡೆಯಲು ನಿಮ್ಮಿಂದ ಸಾಧ್ಯವಾಗದ ಸನ್ನಿವೇಶವನ್ನು ನೀವು ಎದುರಿಸಿದ್ದೀರಾ? ಹೌದು, ಎಂದಾದಲ್ಲಿ ಈ ಪರಿಸ್ಥಿತಿಯನ್ನು ಎದುರಿಸಿದವರು ನೀವು ಒಬ್ಬರೇ ಅಲ್ಲ. ಹಬ್ಬಗಳು, ಆಫೀಸಿನಲ್ಲಿ ಸಂಭ್ರಮಾಚರಣೆ ಇತ್ಯಾದಿಗಳು ಪ್ರತಿಯೊಬ್ಬರ ಜೀವನದಲ್ಲಿ ಇರುತ್ತವೆ. ಒಂದು ವೇಳೆ ನೀವು ಎಲ್ಲವನ್ನೂ ನಿಭಾಯಿಸಲು ಆಗದಿದ್ದಲ್ಲಿ, ಇಂದು ನಾವು ನಿಮ್ಮ ಡಯಟ್ ಪ್ಲಾನ್‌ಗೆ ಹೇಗೆ ಅಂಟಿಕೊಳ್ಳುವುದು ಅಥವಾ ಬದ್ಧರಾಗುವುದು ಎಂದು ನಿಮಗೆ ತಿಳಿಸಿಕೊಡುತ್ತೇವೆ.

ಬನ್ನಿ ನಿಮ್ಮನ್ನು ಮುಜುಗರಕ್ಕೆ ಅಥವಾ ತಡೆಯಲಾಗದಂತಹ ಸ್ಥಿತಿಇಗೆ ಸಿಲುಕಿಸುವ ಆ ಐದು ಸನ್ನಿವೇಶಗಳು ಯಾವುವು ಮತ್ತು ಅವುಗಳನ್ನು ಹೇಗೆ ನಿಭಾಯಿಸುವುದು ಎಂದು ನಿಮಗೆ ತಿಳಿಸಿಕೊಡುತ್ತೇವೆ:

ಕೆಲಸದ ಜಾಗದಲ್ಲಿ ಸಂಭ್ರಮಾಚರಣೆಗಳು

ಉದ್ಯೋಗಿಗಳು ತೀರಾ ಸಾಮಾನ್ಯವಾಗಿ ಈ ಸನ್ನಿವೇಶವನ್ನು ಎದುರಿಸುತ್ತಾರೆ. ಸಹೋದ್ಯೋಗಿಯ ಹುಟ್ಟು ಹಬ್ಬ ಅಥವಾ ಗುರು ತಲುಪಿದ್ದಕ್ಕಾಗಿ ಸಂಭ್ರಮಾಚರಣೆಯ ಅಂಗವಾಗಿ ಪಾರ್ಟಿಗಳು, ಕೇಕ್ ಕತ್ತರಿಸುವಿಕೆಗಳು ನಡೆಯುತ್ತಲೆ ಇರುತ್ತವೆ. ಇದರ ಜೊತೆಗೆ ಚಿಪ್ಸ್ ಅಥವಾ ಸಾಫ್ಟ್ ಡ್ರಿಂಕ್ ಸಹ ಸರಬರಾಜು ಮಾಡಲಾಗುತ್ತದೆ. ಇದು ನಿಮಗೆ ಹೇಗಾದರು ಮಾಡಿ ಸ್ವಲ್ಪ ರುಚಿ ನೋಡೋಣ ಅಥವಾ ಇನ್ನೂ ಸ್ವಲ್ಪ ತಿನ್ನೋಣ ಎಂಬ ಸ್ಥಿತಿಯನ್ನು ನಿಮಗೆ ತರುತ್ತವೆ. ಜೊತೆಗೆ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸುತ್ತಲಿನ ಜನರು ತಿನ್ನುವುದನ್ನು ನೋಡಿದಾಗ ನಿಮಗೂ ಸಹ ತಿನ್ನಬೇಕು ಎನ್ನಿಸಬಹುದು.

ಪಾರ್ಟಿಗಳು ಉಚಿತ ಆದರೆ ಅದರಲ್ಲಿ ಅತಿಯಾಗಿ ತಿಂದರೆ ಅಪಾಯ ಖಚಿತ. ಇವುಗಳನ್ನು ಸೇವಿಸುವ ಮೊದಲು ಆರೋಗ್ಯ ಮತ್ತು ಡಯಟ್ ಪ್ಲಾನ್ ಕುರಿತು ಆಲೋಚನೆ ಮಾಡಿ. ಕೇಕ್‍ಗಳಲ್ಲಿ ಯಥೇಚ್ಛವಾಗಿ ಕ್ರೀಮ್, ಸಕ್ಕರೆ ಮತ್ತು ರಿಫೈನ್ ಮಾಡಲಾದ ಹಿಟ್ಟು ಇರುತ್ತದೆ. ಇದು ನಿಮ್ಮ ಇಡೀ ದಿನದ ಡಯಟ್ ಪ್ಲಾನ್ ಅನ್ನು ಏರು ಪೇರು ಮಾಡುತ್ತದೆ. ಆದ್ದರಿಂದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ ಮತ್ತು ಸಣ್ಣ ಕೇಕ್ ತುಂಡನ್ನು ಮಾತ್ರ ಸೇವಿಸಿ. ಆಮೇಲೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಹೋಗಬೇಡಿ, ಸಣ್ಣ ತುಂಡನ್ನೆ ನಿಮ್ಮ ಸ್ಥಳದಲ್ಲಿ ಕುಳಿತು ಆರಾಮವಾಗಿ ಸೇವಿಸಿ. ಚಿಪ್ಸ್ ಮತ್ತು ಸಾಫ್ಟ್ ಡ್ರಿಂಕ್ ಅನ್ನು ಸೇವಿಸಲೇ ಬೇಡಿ.

ಆಫೀಸ್ ಲಂಚ್/ಡಿನ್ನರ್
ಸಾಮಾನ್ಯವಾಗಿ ಬಫೇಗಳು ಆಫೀಸ್ ಪಾರ್ಟಿಗಳ ಒಂದು ಅಂಗವಾಗಿರುತ್ತವೆ. ನೀವು ಈ ಪಾರ್ಟಿಗಳಲ್ಲಿ ಅಧಿಕವಾಗಿ ಸೇವಿಸುವ ಅಪಾಯವಿರುತ್ತದೆ. ಏಕೆಂದರೆ ಇಲ್ಲಿ ದೊರೆಯುವ ತರಹೇವಾರಿ ತಿಂಡಿಗಳು ನಿಮ್ಮನ್ನು ಹೆಚ್ಚು ತಿನ್ನುವಂತೆ ಪ್ರೇರೇಪಣೆ ಮಾಡಬಹುದು. ಬಫೇಗಳಲ್ಲಿ ನಿಮಗೆ ಕಾಣಿಸುವ ಪ್ರತಿಯೊಂದನ್ನು ರುಚಿ ನೋಡಬೇಕೆಂದು ನೀವು ಹೋದಲ್ಲಿ, ಕೊನೆಗೆ ನಿಮಗೆ ಗೊತ್ತೇ ಇಲ್ಲದೆ ಅಧಿಕವಾಗಿ ಸೇವಿಸುತ್ತೀರಿ. ಹಾಗಾಗಿ ಅಧಿಕವಾಗಿ ತಿನ್ನಬೇಕೆಂಬ ತುಡಿತವನ್ನು ಹೇಗೆ ತಡೆಯುವುದು?

ಮೊದಲು ಯಾವುದೇ ಪಾರ್ಟಿಗೆ ಖಾಲಿ ಹೊಟ್ಟೆಯಲ್ಲಿ ಹೋಗಬೇಡಿ. ಖಾಲಿ ಹೊಟ್ಟೆಯಲ್ಲಿ ಹೋದಲ್ಲಿ ನೀವು ನಿಜವಾಗಿ ಹೆಚ್ಚು ತಿನ್ನುವ ಅಪಾಯವಿರುತ್ತದೆ. ಪ್ರೋಟೀನ್ ಬಾರ್, ಒಣ ಹಣ್ಣುಗಳು ಅಥವಾ ಯೋಗರ್ಟ್ ಅನ್ನು ಪಾರ್ಟಿಗೆ ಹೋಗುವ ಮೊದಲು ಸೇವನೆ ಮಾಡಿ. ಎರಡನೆಯದಾಗಿ, ನೀವು ಏನು ಸೇವಿಸುತ್ತೀರೋ ಅದನ್ನು ನಿಗಾವಹಿಸಿ ಸೇವಿಸಿ. ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಡಿಸಿಕೊಂಡು ನಿಧಾನವಾಗಿ ಸೇವಿಸಿ. ನಿಮ್ಮ ತಟ್ಟೆಯನ್ನು ತುಂಬಿಸಿಕೊಂಡು, ಬಫೇ ಜಾಗದಿಂದ ಪಕ್ಕಕ್ಕೆ ಹೋಗಿ ಮತ್ತು ನಿಧಾನವಾಗಿ ಸೇವಿಸಿ. ಒಂದು ವೇಳೆ ಸಾಧ್ಯವಾದಲ್ಲಿ, ಡೆಸರ್ಟ್‌ಗಳನ್ನು ಸೇವಿಸಬೇಡಿ ಅಥವಾ ಅದನ್ನು ಒಬ್ಬ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

ಹ್ಯಾಪಿ ಹೌವರ್ಸ್
ಹ್ಯಾಪಿ ಹೌವರ್ಸ್ ಎಂಬುದು ನಿಮಗೆ ಸಂತೋಷವನ್ನುಂಟು ಮಾಡಬಹುದು. ಏಕೆಂದರೆ ನಿಮಗೆ ಎರಡು ಡ್ರಿಂಕ್ ಒಂದೇ ಡ್ರಿಂಕಿನ ಬೆಲೆಗೆ ದೊರೆಯಬಹುದು. ಜೊತೆಗೆ ಮಂಚೀಸ್ ಎಂದು ನೀವು ಹೆಚ್ಚಿನ ಡ್ರಿಂಕ್ ಮತ್ತು ಕುರುಕಲು ತಿಂಡಿ ಎರಡನ್ನೂ ಸೇವಿಸಬಹುದು. ಕೊನೆಗೆ ನೀವು ಸಾಮಾನ್ಯವಾಗಿ ಸೇವನೆ ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡ್ರಿಂಕ್ ಸೇವಿಸಬಹುದು. ಆದರೆ ಈ ಹ್ಯಾಪಿ ಹೌವರ್ಸ್ ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ವಿಶೇಷವಾಗಿ ನೀವು ತೂಕ ಕರಗಿಸುವ ಮನಸ್ಸು ಮಾಡಿದ್ದಲ್ಲಿ, ಈ ಹ್ಯಾಪಿ ಹೌವರ್ಸ್‌ಗೆ “ನೋ” ಎನ್ನಿ.

ಹಾಗಾದರೆ ಈ ಹ್ಯಾಪಿ ಹೌವರ್ಸ್ ಅನ್ನು ಹೇಗೆ ನಿಭಾಯಿಸುವುದು? ನೀವು ರೆಸ್ಟೋರೆಂಟಿಗೆ ಹೋಗುವ ಮೊದಲು ಇಷ್ಟು ಮಾತ್ರ ಸೇವಿಸಬೇಕು ಎಂದು ಮಿತಿಯನ್ನು ಹಾಕಿಕೊಳ್ಳಿ. ಡ್ರಿಂಕ್‌ಗಳನ್ನು ಸೇವಿಸುವಾಗ ನಿಧಾನವಾಗಿ ಸೇವಿಸಿ ಮತ್ತು ಎರಡು ಡ್ರಿಂಕ್‌ಗಳ ನಡುವೆ ಒಂದು ಗಂಟೆಯ ವಿರಾಮ ತೆಗೆದುಕೊಳ್ಳಿ. ನಡುವೆ ನೀರು ಅಥವಾ ಜ್ಯೂಸ್ ಅನ್ನು ಸೇವಿಸುತ್ತಾ ಇರಿ, ಇದರಿಂದ ನಿರ್ಜಲೀಕರಣವನ್ನು ತಡೆಯಬಹುದು. ಖಾಲಿ ಹೊಟ್ಟೆಯಲ್ಲಿ ಡ್ರಿಂಕ್ ಮಾಡಲು ಹೋಗಬೇಡಿ. ನಿಮ್ಮ ಡ್ರಿಂಕ್ ಜೊತೆಗೆ ಆರೋಗ್ಯಕಾರಿ ಅಪೆಟೈಸರ್ ಅನ್ನು ಸೇವಿಸಿ.

ಹಬ್ಬಗಳು

ಹಬ್ಬಗಳು ಸಿಹಿಗಳಿಲ್ಲದೆ ಪರಿಪೂರ್ಣವಾಗುವುದಿಲ್ಲ. ಹಬ್ಬಗಳಂದು ತರಹೇವಾರಿ ಸಿಹಿಗಳು ಮತ್ತು ಆಹಾರಗಳನ್ನು ತಯಾರಿಸಿರಲಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಇರುತ್ತವೆ. ಹಬ್ಬಗಳ ಸಂದರ್ಭದಲ್ಲಿ ಕ್ಯಾಲೋರಿ ಕಡಿಮೆ ಇರುವ ಆಹಾರವನ್ನು ಸೇವಿಸಿ. ಇದನ್ನು ಪಾಲಿಸಲು ಕಷ್ಟವಾಗಬಹುದು ಆದರೆ ವಿಧಿಯಿಲ್ಲದೆ ನೀವು ಇದನ್ನು ಪಾಲಿಸಬೇಕಾಗುತ್ತದೆ. ಇದನ್ನು ಪಾಲಿಸಲು ಮಾರ್ಗ ಇದೆ ಎಂಬುದನ್ನು ಮರೆಯಬೇಡಿ.

ಅತಿಯಾಗಿ ತಿಂದರೆ ಅದು ನಿಮ್ಮ ದೇಹದ ಆಕಾರವನ್ನು ಹಾಳು ಮಾಡುತ್ತದೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ಸಿಹಿ ಅಥವಾ ಸ್ನ್ಯಾಕ್ಸ್ ತಯಾರಿಸುವ ಮೊದಲು ಬುದ್ದಿವಂತಿಕೆಯನ್ನು ಬಳಸಿ. ಉದಾಹರಣೆಗೆ, ಕಡಿಮೆ ಕೊಬ್ಬಿರುವ ಹಾಲನ್ನು ಸಿಹಿ ತಯಾರಿಸಲು ಬಳಸಿ ಮತ್ತು ಅದನ್ನು ಸಿಹಿಯನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸಿ. ಇದರಿಂದ ನೀವು ಹೆಚ್ಚೆಂದರೆ 2-3 ತುಂಡುಗಳನ್ನು ಸೇವಿಸಬಹುದು. ಜೊತೆಗೆ ಸ್ನಾಕ್ ಸಮಯದಲ್ಲಿ ಒಂದು ಲೋಟ ನೀರನ್ನು ಕುಡಿದು ನಂತರ ಮುಂದುವರಿಯಿರಿ. ಏಕೆಂದರೆ ಈ ನೀರು ಕುಡಿದರೆ ಹೊಟ್ಟೆ ಅರ್ಧ ಭಾಗ ತುಂಬಿರುತ್ತದೆ. ಹಬ್ಬ ಒಂದು ದಿನ, ಅದರ ಪರಿಣಾಮ ಹಲವು ದಿನ ಎಂಬುದನ್ನು ಮರೆಯಬೇಡಿ. ಒಂದು ದಿನ ನಿಮ್ಮ ತುಡಿತವನ್ನು ತಡೆದುಕೊಳ್ಳಿ ಸಾಕು.

ರಜಾದಿನಗಳು

ಹಬ್ಬಗಳಿಗೆ ಹೋಗುವುದು ಎಂದರೆ ಅಧಿಕ ಕ್ಯಾಲೋರಿಯ ಆಹಾರ ಸೇವನೆ ಮಾಡಲು ಹೋಗುತ್ತೇವೆ ಎಂದಾಗಿದೆ. ಜೊತೆಗೆ ಸಾಫ್ಟ್ ಡ್ರಿಂಕ್‌ಗಳು, ಕೇಕ್‌ಗಳು, ಪಿಜ್ಜಾ, ಬರ್ಗರ್‌ಗಳು, ಸಿಹಿಗಳು ಮತ್ತು ಇನ್ನೂ ಏನೆಲ್ಲಾ ತಿನ್ನಬಹುದು. ಆದರೆ ಒಂದು ವಿಚಾರ ನೆನಪಿಡಿ ಹೆಚ್ಚು ಸೇವಿಸಿದಲ್ಲಿ, ನೀವು ಇದುವರೆಗೂ ಕರಗಿಸಿರುವ ತೂಕ ಮರಳಿ ಬರುತ್ತದೆ. ನಿಮ್ಮ ಪ್ರಯತ್ನ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತದೆಯಲ್ಲವೇ? ಹಾಗಾದರೆ ನಾವು ಏನು ಮಾಡಬಹುದು?

ಇದಕ್ಕೆ ಉತ್ತರ ಮೊದಲೇ ಯೋಜನೆ ಮಾಡಿ. ನೀವು ಹಬ್ಬ ಮಾಡಲು ಅಥವಾ ರಜೆಯಲ್ಲಿ ಹೋಗುವುದಿದ್ದಲ್ಲಿ, ಆಹಾರದ ಕುರಿತಾಗಿ ಪ್ಲಾನ್ ಮಾಡಿ. ಅಧಿಕ ಕ್ಯಾಲೋರಿಯ ಆಹಾರವನ್ನು ಸೇವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಒಮ್ಮೆ ಮಾತ್ರ ನಿಮಗೆ ಇಷ್ಟವಾದ ಆಹಾರವನ್ನು ಸೇವಿಸಿ. ಉಳಿದ ಸಮಯದಲ್ಲಿ ಆರೋಗ್ಯಕಾರಿ ಆಹಾರ ಆಯ್ಕೆಗಳಿಗೆ ಅಂಟಿಕೊಳ್ಳಿ. ಹೊಟ್ಟೆ ಹಸಿದುಕೊಂಡು ಹಬ್ಬದ ಅಡುಗೆ ತಿನ್ನಲು ಕಾಯಬೇಡಿ. ಬದಲಿಗೆ ಆರೋಗ್ಯಕಾರಿ ಆಹಾರ, ಸ್ನ್ಯಾಕ್ಸ್ ತಿನ್ನಿ. ಅದು ಹಣ್ಣು, ಒಣ ಹಣ್ಣು, ಇತ್ಯಾದಿಗಳಾಗಿರಬಹುದು. ಊಟಗಳ ನಡುವೆ ಸಹ ಈ ಆರೋಗ್ಯಕಾರಿ ಸ್ನ್ಯಾಕ್ಸ್ ಅನ್ನು ತಿನ್ನಬಹುದು. ಹಬ್ಬಗಳಲ್ಲಿ ಅವಕಾಶ ಸಿಕ್ಕಲ್ಲಿ, ಆಟಗಳಲ್ಲಿ ಪಾಲ್ಗೊಳ್ಳಿ. ಅದು ಹೋಟೆಲ್/ರೆಸಾರ್ಟ್ ಆಗಿರಲಿ ಆಟಗಳಲ್ಲಿ ಪಾಲ್ಗೊಳ್ಳಿ. ಇದರಿಂದ ನಿಮ್ಮ ಕ್ಯಾಲೋರಿಗಳು ಕರಗುತ್ತವೆ.

ವಿಶೇಷ ಸಂದರ್ಭಗಳು ನಿಮಗೆ ವಿಶೇಷ ಉಡುಗೊರೆಗಳನ್ನು ಮತ್ತು ನೆನಪುಗಳನ್ನು ತರಬಹುದು. ಆದರೆ ಈ ಸಂದರ್ಭದಲ್ಲಿ ನಿಮ್ಮ ಗಮನವನ್ನು ಆರೋಗ್ಯದಿಂದ ದೂರ ಮಾಡಬೇಡಿ. ಸ್ನೇಹಿತರು, ಬಂಧುಗಳ ಜೊತೆಗೆ ಸಂಭ್ರಮವನ್ನು ಆಚರಣೆ ಮಾಡಿ ಮತ್ತು ಅಧಿಕವಾಗಿ ಆಹಾರ ಸೇವಿಸಬೇಡಿ ಎಂಬ ನಿಯಮವನ್ನು ನಾವು ನಿಮಗೆ ಸಲಹೆ ಮಾಡುತ್ತಿದ್ದೇವೆ. ನಿಮ್ಮ ಆರೋಗ್ಯ ಎಲ್ಲದ್ದಕ್ಕಿಂತ ಮುಖ್ಯ ಎಂಬುದನ್ನು ಮರೆಯಬೇಡಿ.