ಮಂಗಳೂರು : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪ್ರೌಢಶಾಲೆ ಮತ್ತು ಪಿಯುಸಿ ವಿಭಾಗದ ಪ್ರವೇಶೋತ್ಸವ ಸೋಮವಾರ ನಡೆಯಿತು.

ಶ್ರೀರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ಶ್ರೀ ಕಾರ್ಯದರ್ಶಿ ಪ್ರಮೋದ ಪಂಡಿತ ಅವರು ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳ ಅಂತಃಸತ್ವವನ್ನು ವೃದ್ಧಿಸುವ, ಅರಿವು ಮೂಡಿಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ಇಲ್ಲಿ ದಿವ್ಯತೆಯ ವಾತಾವರಣವಿದೆ. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಗುರಿಯಿದೆ. ಸಮರ್ಥ ಆಡಳಿತ ಮಂಡಳಿ ಸೇವಾ ರೂಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಕಾಲೇಜು ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯೆ ಸಿಗಬೇಕು ಎಂಬ ಉದ್ದೇಶದಿಂದ ಶ್ರೀಸಂಸ್ಥಾನದವರು ಈ ಸಂಸ್ಥೆಯನ್ನು ಸಮಾಜಕ್ಕೆ ಒದಗಿಸಿದ್ದಾರೆ. ಇಲ್ಲಿ ಶಿಕ್ಷಣ ವ್ಯಾಪಾರವಲ್ಲ. ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡುವ ಮೂಲಕ ಉತ್ತಮ ಪ್ರಜೆಯನ್ನು ಸಮಾಜಕ್ಕೆ ನೀಡಲಾಗುತ್ತದೆ. ಶೀಘ್ರದಲ್ಲೇ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಾಲಾ ಬಸ್ ಸೌಲಭ್ಯವನ್ನು ಒದಗಿಸಲಿದೆ ಎಂದು ಹೇಳಿದರು.

RELATED ARTICLES  ಕೊರೋನಾ : ದೇಶದಲ್ಲಿ XBB.1.5 ಎಂಬ ಹೊಸ ರೂಪಾಂತರ ಪತ್ತೆ

ಇದೇ ಸಂದರ್ಭ ಸಂಸ್ಥೆಯ ಪ್ರಗತಿಗೆ ಕೈಜೋಡಿಸಿದ ಎತ್ತುಕಲ್ಲು ರಾಮಕೃಷ್ಣ ಭಟ್ ಮತ್ತು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಗುರುರಾಜ ಭಟ್ ಅವರನ್ನು ಸಮ್ಮಾನಿಸಲಾಯಿತು. ಇದೇ ಸಂದರ್ಭ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಪ್ರೊ.ವಿ.ಜಿ.ಭಟ್, ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ., ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಟಿ. ಶ್ರೀಕೃಷ್ಣ ಭಟ್ ಸುಳ್ಯ, ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಮಂಗಳೂರು ಮಧ್ಯ ವಲಯ ಅಧ್ಯಕ್ಷ ರಮೇಶ್ ಭಟ್ ಸರವು ಮೊದಲಾದವರು ಉಪಸ್ಥಿತರಿದ್ದರು. 

RELATED ARTICLES  ದೂರು ನೀಡಲು ಬಂದಿದ್ದ ಪತ್ನಿಗೆ ಥಳಿಸಿದ ಗಂಡ.!

ಸೇವಾ ಸಮಿತಿ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಸ್ವಾಗತಿಸಿದರು. ಪ್ರಾಂಶುಪಾಲೆ ವಿದ್ಯಾ ಭಟ್ ಮಾಹಿತಿ ನೀಡಿದರು. ಉಪನ್ಯಾಸಕ ಸೂರ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು. ನವ್ಯಾ ಮತ್ತು ಪ್ರಶಾಂತ್ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕಿ ಮಾಧವಿ ವಂದಿಸಿದರು.

ಸಭೆಯ ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಪ್ರಮೋದ ಪಂಡಿತ, ಪ್ರೊ.ವಿ.ಜಿ.ಭಟ್ ಮತ್ತು ಯು.ಎಸ್.ವಿಶ್ವೇಶ್ವರ ಭಟ್ ಅವರು ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ವಿಶೇಷ ಮಾಹಿತಿ ಕಾರ್ಯಾಗಾರ ನಡೆಸಿದರು.