ಶಿರಸಿ : ಬಿಳಿಸೂಲಿ, ಕಾಡು ಬದನೆ, ಅಂಜೂರ, ದಾಲ್ಚಿನ್ನಿ, ಸರಗಿ ಹಣ್ಣು, ಸಾಲ ದೂಪ, ನೆರಳೆ, ನಾಗಲಿಂಗ, ಕವಳಿ, ಕವಲ ಹಣ್ಣು, ಕಾರೆ ಕಾಯಿ, ನೆಲ್ಲಿ, ಗಾಟೆ ಬಳ್ಳಿ, ಬೇವು, ಅಶೋಕ, ಶ್ರೀಗಂದ, ಉಪ್ಪಾಗೆ, ಬೇಲ, ದ್ಯಾವಣಿಗೆ, ಆಲೆ ಹಣ್ಣು, ಇಳ್ಳಿ, ಹೊಳೆ ತುಮರಿ, ಹೆಬ್ಬಲಸು, ಗಿಡ್ಡ ರಾಮಪತ್ರೆ ಸೇರಿದಂತೆ ನೂರಾರು ಬಗೆಯ ಸಸ್ಯಗಳು ಮತ್ತು ಕಾಡು ಹಣ್ಣುಗಳದ್ದೇ ಕಾರುಬಾರು. ಹೌದು ಇದೇನು ಅಂತೀರಾ ಇದು ಇಂದಿನ ಕಾಡು ಹಣ್ಣಿನ ‌ಮೇಳದ ವಿಶೇಷತೆ.

ಅಳಿವಿನಂಚಿನ ಕಾಡು ಹಣ್ಣುಗಳನ್ನು ಉಳಿಸುವ ಉದ್ದೇಶದಿಂದ ವಿವಿಧ ಜಾತಿಯ ವೈಶಿಷ್ಠ್ಯವಾದ ಕಾಡಿನ ಹಣ್ಣುಗಳ ಪ್ರದರ್ಶನ, ಔಷಧಿ ಸಸ್ಯಗಳ ಪ್ರದರ್ಶನ ಸಹಿತ ಒಂದು ದಿನದ ಕಾಡು ಹಣ್ಣಿನ ಮೇಳವನ್ನು ಇಲ್ಲಿನ ಅರಣ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.ವಿಶೇಷ ಹಣ್ಣುಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

RELATED ARTICLES  ಧರ್ಮ ರಕ್ಷಣೆ ಮಾಡುವವರು ಮಠ ಮಾಡಿಕೊಂಡಿರಲಿ: ಆನಂದ ಅಸ್ನೋಟಿಕರ್

ಮೇಳದಲ್ಲಿ ಹಣ್ಣಿನ ಪ್ರದರ್ಶನದ ಜೊತೆಗೆ ಕೆಲವೊಂದು ಹಣ್ಣುಗಳ ಮಾರಾಟವೂ ಸಹ ಏರ್ಪಡಿಸಲಾಗಿತ್ತು‌. ಕಾಡಿನ ಹಣ್ಣುಗಳ ಕುರಿತು ವಿವಿಧ ಗೋಷ್ಠಿಗಳು ನಡೆದವು. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಡೆದ ಮೇಳದಲ್ಲಿ ಸಂಪೂರ್ಣವಾಗಿ ಕಾಡಿನ ಹಣ್ಣಿನ ಸಂರಕ್ಷಣೆಯ ಕುರಿತು ಬೆಳಕು ಚೆಲ್ಲಲಾಯಿತು.

ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮೇಳವನ್ನು ಗಿಡಗಳಿಗೆ ನೀರು ಉಣಿಸುವ ಮೂಲಕ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ವಿ.ಐ.ಬೆಣಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ” ನಮ್ಮ ರಾಜ್ಯದಲ್ಲಿ ಅತ್ಯುತ್ತಮ ನೈಸರ್ಗಿಕ ಸಂಪನ್ಮೂಲಗಳಿದೆ. ಸುಮಾರು 40 ಸಾವಿರಕ್ಕೂ ಅಧಿಕ ಪ್ರಭೇದದ ಸಸ್ಯಗಳಿದೆ.‌ಸಸ್ಯಗಳು ನಮಗೆ ಹುಟ್ಟಿನಿಂದ ಸಾಯುವ ತನಕವೂ ಅವಶ್ಯಕತೆಯಿದೆ. ಔಷಧಿ, ಆಹಾರ, ಮನೆ ಸಾಮಾಗ್ರಿ, ಕೃಷಿ ಸಲಕರಣೆ ಹೀಗೆ ಅತಿ ಅವಶ್ಯಕವಾಗಿದೆ. ಅದರಲ್ಲಿಯೂ ಇಲ್ಲಿಯ ಪಶ್ಚಿಮ ಘಟದಲ್ಲಿ 4 ಸಾವಿರ ಪ್ರಬೇಧದ ಸಸಿಗಳಿದೆ. ಅದರಲ್ಲಿ 1500 ಸಸ್ಯಗಳು ಔಷಧಿ ಗುಣಗಳನ್ನು ಹೊಂದಿದೆ. ಇಲ್ಲಿ ಸುಮಾರು 170 ಕಾಡು ಜಾತಿ ಮರಗಳಿದ್ದು, ಅದರಲ್ಲಿ 130 ಉತ್ತರ ಕನ್ನಡದಲ್ಲಿದೆ ” ಎಂದು ಮಾಹಿತಿ ನೀಡಿದರು.

RELATED ARTICLES  ಕುಮಟಾದಲ್ಲಿ ಬ್ರಹತ್ ಜನಾಗ್ರಹ ಸಭೆ: ರಾಮ ಮಂದಿರಕ್ಕಾಗಿ ಕೇಳಿಬಂತು ಆಗ್ರಹ