@ ಎಮ್ ಎಸ್ ಶೋಭಿತ್ ಮೂಡ್ಕಣಿ

ಮೈಸೂರಿನ ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ನೀಡುವ ಪಂಡಿತ ಕೆ.ಎಸ್.ಹಡಪದ ಪ್ರಶಸ್ತಿಗೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪಂ| ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಭಾಜನರಾಗಿದ್ದಾರೆ.

ಸಂಗೀತ ಕಲಾವಿದರಿಗೆ, ಪ್ರಿಯರಿಗೆ ಮಾತ್ರವಲ್ಲ ಜನಸಾಮಾನ್ಯರಲ್ಲೂ ಒಂದಾಗಿ ತಬಲಾ ವಾದನ ಕಲೆಯ ಅಧ್ಯಯನ, ಅಧ್ಯಾಪನ, ಪ್ರಸರಣಗಳಿಗೆ ತಮ್ಮನ್ನು ಅರ್ಪಿಸಿಕೊಂಡವರು ಪಂ| ಗೋಪಾಲಕೃಷ್ಣ ಹೆಗಡೆ. ಅವರಿಗೆ ಈ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ಆಕಾಶವಾಣಿ ಬಿ ಹೈ ಗ್ರೇಡ್ ಕಲಾವಿದರಾಗಿರುವ ಇವರು ಸಂಗೀತ ವಿದ್ವಾನ್, ಸಂಗೀತ ರತ್ನ ಪದವೀಧರರು. 7 ಕ್ಕೂ ಹೆಚ್ಚು ವಿದೇಶಗಳಲ್ಲಿ ಮತ್ತು ದೇಶಗಳಲ್ಲಿ ನೂರಾರು ಶಿಷ್ಯರಿದ್ದಾರೆ. 

ಗಂಧರ್ವ, ರಹಮತ್ ಖಾನ್, ಆಕಾಶವಾಣಿ, ಹಂಪಿ, ಮೈಸೂರು ಸಂಗೀತ ಸಮ್ಮೇಳನದಲ್ಲಿ ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ಪದ್ಮವಿಭೂಷಣರಾದ ಗಂಗೂಬಾಯಿ ಹಾನಗಲ್, ಪದ್ಮಭೂಷಣ ಪಂ| ಬಸವರಾಜ್ ರಾಜಗುರು, ಪದ್ಮಶ್ರೀ ವೆಂಕಟೇಶ ಕುಮಾರ್, ಪ್ರವೀಣ್ ಗೋಡ್ಖಿಂಡಿ, ರಫೀಕ್ ಖಾನ್, ಫಯಾಜ್ ಖಾನ್ ಅಂಥವರಿಗೆ ಸಾಥ್ ನೀಡಿದ ಗೋಪಾಲಕೃಷ್ಣ ಹೆಗಡೆ ತಮ್ಮ ಸಹೋದರ ಪರಮೇಶ್ವರ ಹೆಗಡೆ ಮತ್ತು ನೂರಾರು ಕಲಾವಿದರಿಗೆ ಸಾಥ್ ನೀಡಿದ್ದಾರೆ.

RELATED ARTICLES  ಹೊನ್ನಾವರ ರೋಟರಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಯಾವ ವಿದ್ಯಾರ್ಥಿಗೂ ಒಲ್ಲೆ ಎನ್ನದ ಗೋಪಣ್ಣನ ಸಾಥ್ ಕಾರ್ಯಕ್ರಮಕ್ಕೆ ಸಮಾನವಾಗಿ ಕಳೆಗಟ್ಟುತ್ತದೆ. ಸಾಂಸ್ಕೃತಿಕ ವಿನಿಮಯದಂತೆ ಕೆನಡಾ, ಅಮೇರಿಕಾದಲ್ಲೂ ಕಾರ್ಯಕ್ರಮ ನೀಡಿರುವ ಇವರು ಹೊನ್ನಾವರದ ಎಸ್.ಡಿ.ಎಮ್‌. ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿದ್ದಾರೆ.

ಹಲವಾರು ಸಂಗೀತ ಸಂಘಟನೆಗಳ ಜೊತೆ ದುಡಿಯುವ ಇವರು ಏರ್ಪಡಿಸುವ ಕರಿಕಾನಮ್ಮ ಬೆಟ್ಟದ ಬೆಳದಿಂಗಳ ಸಂಗೀತ ಪ್ರಸಿದ್ದವಾದದ್ದು. ದೇಶ ವಿದೇಶದ ಸಂಗೀತಾಸಕ್ತರು ಕಾರ್ಯಕ್ರಮಕ್ಕೆ ಕಾದಿರುತ್ತಾರೆ. ಈ ವರ್ಷ ಜಿಲ್ಲೆಯ 60 ಹಿರಿಯ ಸಂಗೀತಗಾರರನ್ನು ಕರೆದು ಗೌರವಿಸಿದ್ದು ಗೋಪಣ್ಣನ ಸಜ್ಜನಿಕೆಗೆ ಸಾಕ್ಷಿ. ತಬಲಾ, ಚಂಡೆ, ಮದ್ದಳೆ, ಯಕ್ಷಗಾನದ ಹಾಡುಗಳನ್ನೊಳಗೊಂಡ ವಿಶಿಷ್ಟ ಲಯ-ಲಾಸ್ಯ, ಲಯತರಂಗ, ರಾಗ-ರಂಗ ಪ್ರಯೋಗ ವಿದೇಶದಲ್ಲೂ ಕುತೂಹಲ ಮೂಡಿಸಿತ್ತು.

ತಂದೆ ಸಂಗೀತ ಪ್ರಿಯ ಕಲ್ಭಾಗ ಗೋವಿಂದ ಹೆಗಡೆಯ 6 ಮಕ್ಕಳು ಸಂಗೀತಗಾರರು. ತಂದೆಯ ಕಠಿಣ ಶಿಸ್ತಿನಲ್ಲಿ ಎಸ್.ಎಮ್.ಭಟ್ ಕಟ್ಟಿಗೆ, ಶೇಷಗಿರಿ ಹಾನಗಲ್ ಮೊದಲಾದವರಿಂದ ತಬಲಾ ವಾದನ ಕಲಿತ ಗೋಪಾಲಕೃಷ್ಣ ಹೆಗಡೆ ರಕ್ತಗತವಾಗಿ ಬಂದ ಕಲೆಯ ಒತ್ತಡಕ್ಕೆ ಸಿಲುಕಿ ಹಳ್ಳಿಯ ನಾಟಕ ತಂಡದಲ್ಲಿ ಪಾಲ್ಗೊಳ್ಳುವುದರಿಂದ ಆರಂಭಿಸಿ ವಿಶ್ವ ಪ್ರಸಿದ್ದರೊಂದಿಗೆ ಪಾಲ್ಗೊಂಡಿದ್ದಾರೆ. ಪತ್ನಿ ಭಾರತಿ ಸಿತಾರ್ ವಾದಕಿ.

RELATED ARTICLES  ಟಿ.ಎಸ್.ಎಸ್ ಸಂಯೋಜನೆಯಲ್ಲಿ ಯಶಸ್ವಿಯಾಯ್ತು ಅಟೋ ಎಕ್ಸ್‍ಪೋ-2018 ಮತ್ತು ಫುಡ್‍ ಎಕ್ಸಪ್ರೆಸ್: ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಮಗ ಓಂಕಾರ ವಿಜ್ಞಾನ ಸಂಶೋಧನೆ ನಡೆಸಲು ತಬಲಾದೊಂದಿಗೆ ಅಮೆರಿಕಾಕ್ಕೆ ಹೋಗಿದ್ದಾನೆ. ಕಠಿಣ ದಿನಗಳನ್ನು ನಗುತ್ತಲೇ ಕಳೆದು ಕಲೆಯಲ್ಲಿ ಪರಿಣಿತಿ ಸಾಧಿಸುತ್ತಾ ಉನ್ನತ ಸ್ಥಾನಕ್ಕೇರಿದರೂ ಸರಳತೆ, ಸಜ್ಜನಿಕೆ ಉಳಿಸಿಕೊಂಡ ಗೋಪುವಿನ ತಬಲಾಕ್ಕೆ ಪದ್ಮವಿಭೂಷಣ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯಂತಹ ಸೂಕ್ಷ್ಮ ಕಲಾಪ್ರೇಮಿಗಳು ತಲೆದೂಗಿದ್ದಾರೆ. ಪ್ರಶಸ್ತಿ ಗೋಪಾಲಕೃಷ್ಣ ಹೆಗಡೆಗೆ ಹೊಸ ಹುರುಪು ನೀಡಲಿ.

ಐದು ಸಾವಿರ ರೂ. ನಗದು ಮತ್ತು ಪ್ರಶಸ್ತಿಯನ್ನು ಜೂ.3 ಇಂದು ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.