ಕಾರವಾರ: ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶ ವಿಠ್ಠಲ್ ಎಸ್ ಧಾರವಾಡಕರ್ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಇಂದು ಪ್ಲಾಸ್ಟಿಕ್ ಮಾನವ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಸಮುದ್ರದಲ್ಲಿ ಮೀನು ಸಿಗುವ ಬದಲು ಪ್ಲಾಸ್ಟಿಕ್ ಸಿಗುವಂತಾಗಿದೆ ಅಲ್ಲದೇ ಹಿಮಾಲಯದಲ್ಲೂ ಪ್ಲಾಸ್ಟಿಕ್ ತುಂಬಿ ತುಳುಕುತ್ತಿ ಇದಕ್ಕೆ ಮಾನವನೊಂದಿಗೆ ಧನಕರುಗಳು, ಜಲಚರಗಳು ಬಲಿಯಾಗುತ್ತಿವೆ. ಪ್ಲಾಸ್ಟಿಕ್ ವಿರೋದಿಸಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿರುತ್ತದೆ ಎಂದು ಅವರು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಂದ ಪ್ರಕಾಶಿತವಾದ ಜ್ಯೂನಿಯರ್ ಪರಿಸರ ಸಂಭ್ರಮ ಮತ್ತು ನಿಸರ್ಗ ಸಂಧಾನ ಪುಸ್ತಕ ಸಂಚಿಕೆ ಹಾಗೂ ಅರಣ್ಯ ಇಲಾಖೆಯ ಸಹಾಯವಾಣಿ ಮತ್ತು ಪಕ್ಷಿಗಳ ಕುರಿತ ಮಾಹಿತಿ ಕೈಪಿಡಿ ಬಿಡುಗೊಡೆಗೊಳಿಸಿ ವಿತರಿಸಲಾಯಿತು. ನಂತರ ರಾಜ್ಯ ಮಾಲಿನ್ಯ ಮಂಡಳಿ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಕುರಿತ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ ಎಲ್ಲರೂ ತಮ್ಮ ತಮ್ಮ ಜನ್ಮ ದಿನದಂದು ಒಂದು ಸಸಿ ನೆಡುವ ಮೂಲಕ ಆಚರಿಸಿಕೊಂಡರೆ ತಾವು ಬೆಳೆಯುವದರೊಂದಿಗೆ ಕಾಡು ನಾಡು ಬೆಳೆಸಿದಂತಾಗುತ್ತದೆ. ಪರಿಸರ ಉಳುವಿಗೆ ನಾವು ಉಡುಗೊರೆ ನೀಡಿದಂತಾಗುತ್ತದೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಮೂಲಕ ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳೊಣ ಎಂದರು.
ಅರಣ್ಯ ಸಂರಕ್ಷಣಾಧಿಕಾರಿ ಕೆ.ಗಣಪತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ವಿಜಯಾ ಹೆಗಡೆ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ವಂದಿಸಿದರು.