ಕುಮಟಾ: ಕೆನರಾ ಎಜುಕೇಶನ್ ಸೊಸೈಟಿಯ ಐದನೆ ಕುಡಿ ಗಿಬ್ ಆಂಗ್ಲಮಾಧ್ಯಮ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಂಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ವಸುದೇವ ಯಶ್ವಂತ ಪ್ರಭು ಅವರು ಮಾತನಾಡಿದರು. “ಪ್ರತಿಷ್ಠಿತ ವಿದ್ಯಾಸಂಸ್ಥೆಯು ಇಂದು ಹೆದ್ದಾರಿಗೆ ಹತ್ತಿರವಾದ ಹೆರವಟ್ಟಾ ಮಾರ್ಗದಲ್ಲಿ ನಾವಿನ್ಯತೆಯ ಕಲಿಕಾ ಕೊಠಡಿಯೊಂದಿಗೆ ಸುಸಜ್ಜಿತವಾಗಿ ನೆಲ ಅಂತಸ್ತಿನಲ್ಲಿ ಸಂಪೂರ್ಣ ಸಿದ್ಧಗೊಂಡಿದ್ದು, ಜೂನ್ 9 ಶನಿವಾರದಂದು ಸಂಜೆ ಐದು ಗಂಟೆಗೆ ಉದ್ಘಾಟನೆಗೊಳ್ಳಲಿದೆ” ಎಂದರು.
ಗಿಬ್ ಹೈಸ್ಕೂಲಿನ ಶತಮಾನೋತ್ಸವ ಸಮಾರಂಭದಲ್ಲಿ ಶ್ರೀಗಳಿಂದ ಶಂಕುಸ್ಥಾಪನೆಗೊಂಡ ಈ ಕಟ್ಟಡವು ಇಂದು ಕಲಿಕಾ ಚಟುವಟಿಕೆಗಳಿಗೆ ತೆರೆಯಲಿದೆ. ಶ್ರೀ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರ ಕರಕಮಲದಿಂದ ಉದ್ಘಾಟನೆ ನೆರವೇರಲಿದ್ದು, ಈ ಸಮಯದಲ್ಲಿ ಶ್ರೀಗಳ ಶಿಷ್ಯರಾದ ಪರಮಪೂಜ್ಯ ಶ್ರೀ ವಿದ್ಯಾಧೀಶ ಸ್ವಾಮೀಜಿ ಇವರ ಉಪಸ್ಥಿತಿ ಇರುತ್ತದೆ ಎಂದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕುಮಟಾ ಹೊನ್ನಾವರ ಶಾಸಕರಾದ ದಿನಕರ ಶೆಟ್ಟಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜಿ.ಮುಲ್ಲಾ ಆಗಮಿಸಲಿದ್ದಾರೆ ಎಂದೂ ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್.ಪ್ರಭು, ಸದಸ್ಯ ಕೃಷ್ಣದಾಸ ಪೈ, ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು, ಗಿಬ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ವಿನಾಯಕ ಶಾನಭಾಗ, ಗಿಬ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಶೋಭಾ ಮುಜುಮದಾರ ಮತ್ತಿತರರು ಇದ್ದರು.