ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಹರಸಾಹಸ ನಡೆಸಿ ಮೊದಲ ಕಂತಿನ ಸಂಪುಟ ವಿಸ್ತರಣೆ ಕಾರ್ಯ ನಡೆಸಿದ್ದು ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ,ಹೆಚ್.ಡಿ.ರೇವಣ್ಣ,ಸಾ.ರಾ.ಮಹೇಶ್,ಎನ್.ಮಹೇಶ್ ಸೇರಿದಂತೆ ಒಟ್ಟು ಇಪ್ಪತ್ತೈದು ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷೇತರರಾಗಿ ಆಯ್ಕೆಯಾಗಿ ಬಂದ ಆರ್.ಶಂಕರ್ ಸೇರಿದಂತೆ ಹದಿನೈದು ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ,ಬಿಎಸ್ಪಿಯ ಮಹೇಶ್ ಸೇರಿದಂತೆ ಜೆಡಿಎಸ್ ಕೋಟಾದಡಿ ಹತ್ತು ಮಂದಿ ಸಂಪುಟ ದರ್ಜೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಸುಧೀರ್ಘವಾಗಿ ನಡೆದ ಸಚಿವ ಸಂಪುಟ ವಿಸ್ತರಣೆ ಕಾರ್ಯ ಸುಮಾರು ಒಂದೂ ಕಾಲು ಗಂಟೆಗಳ ಕಾಲ ನಡೆಯಿತಲ್ಲದೆ ಅದೇ ಕಾಲಕ್ಕೆ ಭಾರೀ ಬಂಡಾಯದ ಮುನ್ಸೂಚನೆಯನ್ನೂ ನೀಡಿತು.

RELATED ARTICLES  ಕಸಾಯಿಖಾನೆಯಲ್ಲಿ ಕೊನೆಯ ಕ್ಷಣಗಳನ್ನು ಎದುರಿಸುತ್ತಿರುವ ಐದು ಹೋರಿಗಳನ್ನು ರಕ್ಷಿಸಬೇಕಿದೆ

ಜೆಡಿಎಸ್ ಪಕ್ಷದ ವತಿಯಿಂದ ಹೆಚ್.ಡಿ.ರೇವಣ್ಣ,,ಬಂಡೆಪ್ಪ ಕಾಶೆಂಪೂರ್, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಎಂ.ಸಿ.ಮನಗೂಳಿ, ಎಸ್.ಆರ್,ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್. ವೆಂಕಟರಾವ್ ನಾಡಗೌಡ ಹಾಗೂ ಎನ್.ಮಹೇಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಆರ್.ವಿ.ದೇಶಪಾಂಡೆ,ಡಿ.ಕೆ.ಶಿವಕುಮಾರ್,ಕೆ.ಜೆ.ಜಾರ್ಜ್,ಕೃಷ್ಣ ಭೈರೇಗೌಡ,ಎನ್.ಎಸ್.ಶಿವಶಂಕರರೆಡ್ಡಿ,ರಮೇಶ್ ಜಾರಕಿಹೊಳಿ,ಪ್ರಿಯಾಂಕ್ ಖರ್ಗೆ,ಯು.ಟಿ.ಖಾದರ್, ಜಮೀರ್ ಅಹ್ಮದ್, ಶಿವಾನಂದ ಪಾಟೀಲ್,ವೆಂಕಟರಮಣಪ್ಪ,ರಾಜಶೇಖರ ಪಾಟೀಲ್,ಸಿ.ಪುಟ್ಟರಂಗಶೆಟ್ಟಿ,ಆರ್.ಶಂಕರ್ ಹಾಗೂ ಜಯಮಾಲಾ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೊದಲ ಕಂತಿನಲ್ಲಿ ಇಪ್ಪತ್ತೆರಡು ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದರಾದರೂ ಆಕಾಂಕ್ಷಿಗಳ ಒತ್ತಡ ಹೆಚ್ಚಾದ ಕಾರಣದಿಂದಾಗಿ ಈ ಸಂಖ್ಯೆ ಇಪ್ಪತ್ತೈದಕ್ಕೇರಿತು. ಮದ್ಯಾಹ್ನ 2:12 ಕ್ಕೆ ನಿಗದಿಯಾಗಿದ್ದ ಪ್ರಮಾಣ ವಚನ ಸಮಾರಂಭ ಕೆಲ ಕಾಲ ತಡವಾಗಿ ಆರಂಭವಾಯಿತಲ್ಲದೆ ಸುಮಾರು ಒಂದೂ ಕಾಲು ಗಂಟೆ ನಡೆದು ಇತ್ತೀಚಿನ ಇತಿಹಾಸದಲ್ಲೇ ಸುಧೀರ್ಘ ಅವಧಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಎನ್ನಿಸಿಕೊಂಡಿತು.

RELATED ARTICLES  ಜನ ಪರಿವರ್ತನಾ ಸಮಾವೇಶ: ನಾಳೆ ಹಾವೇರಿಗೆ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ.

ಉಭಯ ಪಕ್ಷಗಳ ವತಿಯಿಂದ ಮಂತ್ರಿಗಳಾಗಿ ಆಯ್ಕೆಯಾದವರಿಗೆ ರಾಜ್ಯಪಾಲ ವಾಜೂಭಾಯಿ ವಾಲಾ ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಿದರಲ್ಲದೆ ತದ ನಂತರ ಹೂ ಗುಚ್ಚ ನೀಡಿ ಅವರನ್ನು ಅಭಿನಂದಿಸಿದರು.ಕಳೆದ ತಿಂಗಳ 25 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸಿದ್ದರಾದರೂ ಉಭಯ ಪಕ್ಷಗಳಲ್ಲಿನ ಮಂತ್ರಿ ಪದವಿಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದುದರಿಂದ ಹನ್ನೆರಡು ದಿನಗಳ ಕಾಲ ತಡೆವಾಗಿ ಮಂತ್ರಿ ಮಂಡಲವನ್ನು ವಿಸ್ತರಿಸಿದರು. ಬಂಡಾಯ ಭುಗಿಲೇಳಬಾರದು ಎಂಬ ಕಾರಣಕ್ಕಾಗಿ ಉಭಯ ಪಕ್ಷಗಳು ಸೇರಿ ಇನ್ನೂ ಏಳು ಮಂತ್ರಿ ಸ್ಥಾನಗಳನ್ನು ಉಳಿಸಿಕೊಂಡಿವೆಯಾದರೂ ಅದಾಗಲೇ ಮಂತ್ರಿಗಿರಿಗಾಗಿ ಪೈಪೋಟಿ ನಡೆಸಿದರೂ ಅವಕಾಶ ಸಿಗದವರ ಆಕ್ರೋಶ ಬಹಿರಂಗಗೊಂಡಿದೆ.