ಕುಮಟಾ: ದಕ್ಷಿಣ ಕನ್ನಡ ಕೈರಂಗಳದಲ್ಲಿ ನಡೆದ ಗೋ ಕಳ್ಳತನದ ಘಟನೆ ಮನಸ್ಸಿನಿಂದ ಮಾಸುವ ಮುನ್ನವೇ,ಕುಮಟಾ ತಾಲೂಕಿನ ಕೆಲ ಭಾಗಗಳಲ್ಲಿ ಗೋ ಕಳ್ಳತನ ನಡೆಯುತ್ತಿರುವ ಕುರಿತು ವರದಿಯಾಗುತ್ತಿದೆ.ತಾಲೂಕಿನ ಮೂರೂರು ಅಂಗಡಿ ಕೇರಿಯಲ್ಲಿ ಪಂಚಾಯತದ ಎದುರುಗಡೆಯೇ ರಾತ್ರಿಹೊತ್ತು ರಸ್ತೆಬದಿಯಲ್ಲಿ ಮಲಗಿದ್ದ ಹಸುಗಳನ್ನು ಕದ್ದೊಯ್ಯಲಾಗಿದೆ.
ಸುಮಾರು ಹತ್ತು ದಿನಗಳ ಹಿಂದೆ ರಾತ್ರಿ ಸುಮಾರು 2-00 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಕಳ್ಳರು ರಸ್ತೆ ಬದಿಯಲ್ಲಿ ಮಲಗಿದ್ದ ಹಸುವೊಂದನ್ನು ಹಗ್ಗದಿಂದ ಬಿಗಿದು ಕಾರಿನ ಕಡೆ ಎಳೆದೊಯ್ಯುವಾಗ ಹಸು ಕೂಗಿದೆ.ಪಕ್ಕದ ಮನೆಯಲ್ಲಿ ಹೊರ ಜಗುಲಿಯಲ್ಲಿ ಮಲಗಿದ್ದವರೊಬ್ಬರಿಗೆ ಇದರಿಂದ ಎಚ್ಚರವಾಗಿ ನೋಡಿದಾಗ ಹಸುವನ್ನು ಎಳೆಯುತ್ತಿರುವುದನ್ನು ಕಂಡು ಯಾರದು ಅಂತ ಕೇಳಿದ್ದಾರೆ.ತಕ್ಷಣ ಕಳ್ಳರು ಹಸುವನ್ನು ಹಗ್ಗದ ಸಹಿತ ಹಾಗೆಯೇ ಬಿಟ್ಟು ಹೋಗಿದ್ದರು.ಮೂನ್ನೆ ಶನಿವಾರ ಮತ್ತೆ ಬಂದ ಕಳ್ಳರು ಹಸುವನ್ನು ತುಂಬುತ್ತಿರುವಾಗ ಮತ್ತೆ ಅವರಿಗೆ ಎಚ್ಚರವಾಗಿ ಜೋರಾಗಿಯೇ ಕೂಗಿಕೊಂಡಿದ್ದಾರೆ.ಆಗ ಕಳ್ಳರು ಕೂಡಲೇ ಕಾರನ್ನು ತಿರುಗಿಸಿ ಹೊರಡುವಾಗ ಯಾಕೆ ಕೂಗುತ್ತೀಯಾ ಅಂತ ಬೆದರಿಸಿ ಹೋಗಿದ್ದಾರೆ.ಈ ವಿಷಯವನ್ನು ಹೆಸರು ಹೇಳಲು ಬಯಸದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಇದೇ ರೀತಿ ತಾಲೂಕಿನ ವಕ್ಕನಳ್ಳಿ ,ಚಿತ್ರಗಿ ಕಡೆಯೂ ಹಸುಗಳು,ಕೋಣಗಳು ಕಾಣೆಯಾಗಿರುವ ಸುದ್ದಿ ಇದೆ.ಆದರೆ ಇದುವರೆಗೂ ಯಾರೂ ಸಹ ಈ ಕುರಿತು ದೂರು ದಾಖಲಿಸಿಲ್ಲ.
ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ.ಜನರು ತಮ್ಮ ತಮ್ಮ ಜಾನುವಾರುಗಳು ಸಂಜೆಯೊಳಗೆ ವಾಪಸಾಗದಿದ್ದಲ್ಲಿ ಹುಡುಕಿ ಸಂಜೆಯೊಳಗೆ ಕಟ್ಟಿಹಾಕುವ ವ್ಯವಸ್ಥೆ ಮಾಡಿಕೊಳ್ಳಬೇಕು.ಸಾಕಷ್ಟು ಹುಡುಕಿಯೂ ಸಿಗದಿದ್ದಲ್ಲಿ ಪೋಲೀಸ್ ಠಾಣೆಯಲ್ಲಿ ಸರಿಯಾದ ಗುರುತು,ಮಾಹಿತಿ ಕೊಟ್ಟು ದೂರು ದಾಖಲಿಸಬೇಕು.ಹೀಗಾದಲ್ಲಿ ಪೋಲೀಸರಾಗಲೀ,ಗೋಪರಿವಾರವಾಗಲೀ ಎಚ್ಚರಿಕೆ ವಹಿಸಿ ಕ್ರಮ ಕೈಕೊಳ್ಳಲು ಅನುಕೂಲವಾಗುತ್ತದೆ ಇಲ್ಲವಾದಲ್ಲಿ ಕೇರಳ,ದಕ್ಷಿಣ ಕನ್ನಡ ದಂತೆ ಕುಮಟಾದಲ್ಲಿಯೂ ಗೋವು ಸಂತತಿ ನಾಶವಾಗಬಹುದು.
ಈಗಾಗಲೇ ಕುಮಟಾ- ಮೂರೂರು ರಸ್ತೆಯಂಚಿನ ಬಯಲಿನಲ್ಲಿ ಮೆಂದು ರಾತ್ರಿಹೊತ್ತು ರಸ್ತೆ ಬದಿಯಲ್ಲಿ ಮಲಗುತ್ತಿರುವ ಗೋವುಗಳು ಇತ್ತೀಚೆಗೆ ಕಾಣಿಸುವುದೇ ಇಲ್ಲ.ಎಷ್ಟು ಗೋವುಗಳು ಕಳ್ಳತನವಾಗಿವೆ,ಎಷ್ಟು ಹಸುಗಳು ಮನೆಗೆ ಸೇರಿವೆ ಲೆಕ್ಕವೂ ಸಿಗುವುದಿಲ್ಲ.ಗೋವನ್ನು ಕಳೆದುಕೊಂಡವರು ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಬೇಕಾಗಿ ವಿನಂತಿಸುತ್ತೇವೆ.
ಸುಬ್ರಹ್ಮಣ್ಯ ಹೆಗಡೆ(ಬಾಬಣ್ಣ)
ಮೂರೂರು-ಕಲ್ಲಬ್ಬೆ ‘ಗ್ರಾಮ ಗೋಪರಿವಾರ’ದ ಅಧ್ಯಕ್ಷ.