ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನಕರ ಶೆಟ್ಟಿಯವರು ರಾಜ್ಯ ಸರಕಾರವು ಶರಾವತಿ ನದಿಯಿಂದ ಕುಮಟಾ ಹಾಗೂ ಹೊನ್ನಾವರಕ್ಕೆ ಕುಡಿಯುವ ನೀರು ಪೂರೈಸಲು ೧೦೦ ಕೋಟಿ ರೂ.ಗಳನ್ನು ಮಂಜೂರಿ ಮಾಡಿತ್ತು. ಈಗ ಹೊನ್ನಾವರದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಆ ಯೋಜನೆಯ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದೆ ಎಂದು ತಿಳಿಸಿದರು. ಕುಮಟಾ ಕ್ಷೇತ್ರದಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು ಈ ಸಮಸ್ಯೆಯನ್ನು ಬಗೆಹರಿಸಲು ೧೦೦ ಕೋಟಿ ರೂ.ಗಳ ಶರಾವತಿ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದರಿಂದ ಈ ಭಾಗದಲ್ಲಿ ಸಂಚರಿಸುವವವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಐಆರ್‌ಬಿ ಕಂಪೆನಿಯವರ ಜತೆ ಮಾತನಾಡಿದ್ದೇನೆ. ತಂಡ್ರಕುಳಿ ಸೇರಿದಂತೆ ಗುಡ್ಡ ಕುಸಿಯಬಹುದಾದ ಸ್ಥಳಗಳಲ್ಲಿ ಕೂಡಲೇ ಮುಂಜಾಗರುಕತೆ ವಹಿಸಲು ಸೂಚಿಸಲಾಗಿದೆ. ಕುಮಟಾದಲ್ಲಿ ಬೈಪಾಸ್ ಮಾಡುವುದರಿಂದ ಈ ಭಾಗದಲ್ಲಿ ಪಾಳು ಬಿದ್ದ ಜಾಗಗಳಿಗೆ ಬೇಡಿಕೆ ಹೆಚ್ಚಿ ಅನುಕೂಲವೇ ಆಗುತ್ತಿತ್ತು. ಆದರೆ ಸದ್ಯಕ್ಕೆ ಬೈಪಾಸನ್ನು ಕೈಬಿಡಲಾಗಿದ್ದು ಮುಂದೆ ಸುಮಾರು ೧೫ ವರ್ಷಗಳ ಬಳಿಕವಾದರೂ ಮಾಡಲೇ ಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಜನರನ್ನು ಮನವೊಲಿಸುವ ಕೆಲಸವಾಗಬೇಕಿದೆ ಎಂದರು.
ಮಳೆ-ಗಾಳಿಯಿಂದಾಗಿ ಕುಮಟಾ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಜೂ. ೧೧ ರಂದು ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈಗಾಗಲೇ ಕ್ಷೇತ್ರದಲ್ಲಿ ಮಂಜೂರಾದ ವಿವಿಧ ಕಾಮಗಾರಿಗಳು ಹಾಗೂ ಹಾಗೂ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ತರಲು ಹೇಳಿದ್ದು ಸಭೆಯಲ್ಲಿ ಇಂತಹ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚನೆ ನೀಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.