ಕುಮಟಾ : ತಾಲ್ಲೂಕಿನ ಹೊಳೆಗದ್ದೆ ಭಾಗದ ಗ್ರಾಮಸ್ಥರು ಅಕ್ರಮ ಸಾರಾಯಿ ಮಾರಾಟ ವಿರುದ್ಧ ಇಂದು ಪೋಲಿಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆದಿದೆ.
ಕುಮಟಾ ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿರುವಂತೆ ದೇವಗಿರಿ ಪಂಚಾಯತ ಹೊಳೆಗದ್ದೆ ಯ ಭಾಗದಲ್ಲಿಯೂ ಜೋರಾಗಿ ಸಾರಾಯಿ ಮಾರಾಟ ನಡೆಯುತ್ತಿತ್ತು. ಇದನ್ನು ಸಹಿಸದ ಹೊಳೆಗದ್ದೆಯ ಮಹಿಳೆಯರು ಹಾಗೂ ಗ್ರಾಮಸ್ಥರು ಬಂದ್ ಮಾಡುವಂತೆ ಪ್ರತಿಭಟಿಸಿ ಅಲ್ಲಿನ ಪಂಚಾಯತ ಸಹಕಾರದೊಂದಿಗೆ ಕೆಲ ದಿನಗಳ ಹಿಂದೆ ಅಕ್ರಮ ಸಾರಾಯಿ ಮಾರಾಟ ಬಂದ್ ಮಾಡಿಸಿದ್ದರು ಆದರೆ ಇದೀಗ ಏಕಾಏಕಿ ಸಾರಾಯಿ ವಾಸನೆ ಗ್ರಾಮದೆಲ್ಲೆಡೆ ಮತ್ತೆ ಹರಡಲು ಪ್ರಾರಂಭಿಸಿದ್ದು ಇದನ್ನು ಪ್ರತಿಭಟಿಸಿ ಕೆಲ ಮಹಿಳೆಯರು ಮತ್ತು ಗ್ರಾಮಸ್ಥರು ಇಂದು ಕುಮಟಾ ಪೋಲಿಸ್ ಠಾಣೆಗೆ ಆಗಮಿಸಿ ಕೂಡಲೇ ಬಂದ್ ಮಾಡಿಸುವಂತೆ ವಿನಂತಿಸಿದ್ದಾರೆ.
ಈ ಬಗ್ಗೆ ಅಲ್ಲಿನ ಗ್ರಾ ಪಂ ಅಧ್ಯಕ್ಷ ಸುರೇಶ ನಾಯ್ಕ ರವರನ್ನು ವಿಚಾರಿಸಿದಾಗ ಜನರಿಗೆ ಅದು ಬೇಡವೆಂದಾಗ ಮಾಡುವುದು ತಪ್ಪಾಗುತ್ತದೆ.ಗ್ರಾಮೀಣ ಭಾಗದಲ್ಲಿ ಮಿತಿ ಮೀರಿ ಅಕ್ರಮ ಸಾರಾಯಿ ಮಾರಾಟ ಜಾಸ್ತಿ ಆಗಿದೆ ಇದಕ್ಕೆ ಅಬಕಾರಿ ಇಲಾಖೆ ಯವರೇ ನೇರ ಹೊಣೆ ಎಂದು ಆರೋಪಿಸಿದರಲ್ಲದೇ ಅಬಕಾರಿ ಇಲಾಖೆಯವರ ಸಹಕಾರ ಇಲ್ಲದೇ ಹೋದಲ್ಲಿ ಇದು ಮತ್ತೆ ತಲೆ ಎತ್ತಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು..* ಅಲ್ಲದೇ ಈಗಾಗಲೇ ಬಹಳ ಸಲ ಅಬಕಾರಿ ಇಲಾಖೆಯವರಿಗೆ ಪಂಚಾಯತ ಪರವಾಗಿ ಅಧಿಕೃತ ಪತ್ರ ಬರೆದರೂ ಕೂಡ ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಈಗ ಮತ್ತೊಮ್ಮೆ ನಾನು ಎಲ್ಲ ನನ್ನ ಸದಸ್ಯರ ಜೊತೆ ಚರ್ಚಿಸಿ ಗ್ರಾಮ ಪಂಚಾಯತ ಪರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು..