ಕುಮಟಾ : ಒಂದು ತಿಂಗಳಿನಿಂದ ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಹೆಗಡೆಯ ವಿಪ್ರ ಒಕ್ಕೂಟದ ವತಿಯಿಂದ ನಡೆಸಲಾಗುತ್ತಿದ್ದ ನಾಲ್ಕು ವೇದಗಳ ಪಾರಾಯಣ ಮಹಾಸತ್ರ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಜರುಗಿತು.
ಒಂದು ತಿಂಗಳಿನಿಂದ ಹೆಗಡೆ ದೇವಾಲಯದಲ್ಲಿ ವಿಪ್ರ ಒಕ್ಕೂಟದವರು ಲೋಕಕಲ್ಯಾಣಾರ್ಥವಾಗಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದಗಳ ಪಾರಾಯಣವನ್ನು ಪ್ರತಿಯೊಂದು ಏಳು ದಿನಗಳ ಕಾಲ ಶೃಂಗೇರಿಯ ಘನಪಾಠೀ ವೇ ಮೂ ಶಂಕರ ಭಟ್ಟರು, ಗೋಕರ್ಣದ ಘನಪಾಠೀ ವೇ ಮೂ ಅನಂತ ಖರೆ, ಗುಡ್ಡೇಬಾಳದ ವೇ ಮೂ ನಾರಾಯಣ ಭಟ್ಟರು, ಉತ್ತರ ಪ್ರದೇಶದ ನೊಯ್ಡಾದ ಪಂಡಿತ್ ರಮೇಶವರ್ಧನ್ ರವರ ಮುಖಾಂತರ ನೆರವೇರಿಸಲಾಯಿತು.
ಈ ನಡುವೆ ಶ್ರೀಪಾದ ಭಟ್ಟ ಕಡತೋಕ ಹಾಗೂ ಡಾ. ಜಿ ಎಲ್ ಹೆಗಡೆ ಯವರಿಂದ “ಗೀತ ರಾಮಾಯಣ” ಮತ್ತು ಕುಂದಾಪುರದ ವೇ ಮೂ ನಾಗರಾಜ ಕೆದಿಲಾಯ ಮತ್ತು ವೇ ಮೂ ಗುರುಮೂರ್ತಿ ಅಡಿಗರಿಂದ ಪವಮಾನ ಹವನ ಮತ್ತು ಪವಮಾನ ಪಾರಾಯಣ ನಡೆಸಲಾಯಿತು..
ಸಮಾರೋಪ ಸಮಾರಂಭದಂದು ವಿಪ್ರ ಒಕ್ಕೂಟದ ವೈದಿಕ ವಿಭಾಗದಿಂದ ವಿವಿಧ ಹವನಗಳು ಮತ್ತು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಮೊಕ್ತೆಸರರಾಗಿ 50 ವರ್ಷ ಪೂರೈಸಿದ ನಾಗೇಶ ಶಾನಭಾಗ ರವರನ್ನು, ಇತರ ಮೊಕ್ತೆಸರರಾದ ಪಿ ಎಮ್ ಶಾನಭಾಗ ಹೆಗಡೆಕರ್ ಮತ್ತು ಶ್ರೀಪತಿ ಹೆಗಡೆ ಯವರನ್ನು ವಿಪ್ರ ಒಕ್ಕೂಟದವರು ಹಾಗೂ ಶಾಸಕ ದಿನಕರ ಶೆಟ್ಟಿ ಮತ್ತು ಇಂಡಗುಂಜಿ ದೇವಸ್ಥಾನದ ಮುಖ್ಯ ಟ್ರಸ್ಟಿ ಡಾ ಜಿ ಜಿ ಸಭಾಹಿತರು ಸನ್ಮಾನಿಸಿದರು ಜೊತೆಗೆ ಊರಿನ ಹೆಮ್ಮೆಯ ಪುತ್ರ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸುದರ್ಶನ ಟಿ ಭಟ್ಟ ಮತ್ತು ಎನ್ ಎಮ್ ಎಮ್ ಎಸ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ರಕ್ಷಾ ಹೆಗಡೆ ಯವರನ್ನೂ ಕೂಡ ಸನ್ಮಾನಿಸಿ ಗೌರವಿಸಿದರು.
ನಂತರ ಬ್ರಾಹ್ಮಣ ಸಮಾಜದ ವಿಪ್ರ ಒಕ್ಕೂಟದ ವತಿಯಿಂದ ದಾಖಲೆಯ ಗೆಲುವು ಸಾಧಿಸಿದ ಶಾಸಕ ದಿನಕರ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು…
ಸನ್ಮಾನ ಸ್ವೀಕರಿಸಿದ ಎಲ್ಲರೂ ಸಂತಸದ ಕ್ಷಣಗಳನ್ನು ಹಂಚಿಕೊಂಡರು.. ನಂತರ ಮಾತನಾಡಿದ ದಿನಕರ ಶೆಟ್ಟಿ ತಾಯಿಯ ಸನ್ನಿಧಾನದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಬ್ರಾಹ್ಮಣ ಸಮಾಜದಿಂದ ಗೌರವ ಸ್ವೀಕರಿಸಿರುವುದು ಸಂತಸ ತಂದಿದೆ. ಬ್ರಾಹ್ಮಣ ಸಮಾಜದಿಂದ ನನಗೆ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಜೊತೆ ನಾನಿರುತ್ತೇನೆ ಎಂದು ಹೇಳುತ್ತಲೇ ಕೆಲವರು ಊರಿನ ನೀರಿನ ಸಮಸ್ಯೆ ಹಾಗೂ ಮಾಸೂರು ರಸ್ತೆ ಬಗ್ಗೆ ಪ್ರಸ್ತಾಪಿಸಿದಾಗ ಶಾಸಕರು ಈಗಾಗಲೇ ಕುಡಿಯುವ ನೀರಿನ ಬಗ್ಗೆ ರೂಪುರೇಷೆ ತಯಾರಿಸಿ ಕಳುಹಿಸಲಾಗಿದೆ ಇನ್ನೂ ಬೇರೆ ಬೇರೆ ಮೂಲಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಮತ್ತು ಮಾಸೂರು ರಸ್ತೆಯನ್ನು ಕೂಡ ಮಳೆಗಾಲದ ನಂತರ ಮಾಡಿಸುತ್ತೇನೆ ಎಂದರು.. ನನಗೆ ಕೆಲಸ ಮಾಡುವ ಮನಸ್ಸಿದೆ. ಕಾಲಹರಣ ಮಾಡದೇ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅಭಿವೃದ್ಧಿ ಯ ದಿಶೆಯಲ್ಲಿ ಹೆಜ್ಜೆ ಇಡುವ ಕೆಲಸ ಮಾಡುತ್ತೇನೆ. ಹೆಗಡೆಗೂ ಕೂಡ ಹಿಂದೆ ಶಾಸಕನಾಗಿದ್ದಾಗ ಸಾಕಷ್ಟು ಕೆಲಸ ಮಾಡಿಸಿದ್ದೆ ಮುಂದೆಯೂ ಕೂಡ ನೆರವಾಗುತ್ತೇನೆ ಎಂದರು.. ವಿಪ್ರ ಒಕ್ಕೂಟದ ಈ ಲೋಕ ಕಲ್ಯಾಣದ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಒಕ್ಕೂಟದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.
ಇನ್ನೋರ್ವ ಪ್ರಮುಖರು ಡಾ ಜಿ ಜಿ ಸಭಾಹಿತರು ಮಾತನಾಡಿ ವಿಪ್ರ ಒಕ್ಕೂಟದ ಒಂದು ತಿಂಗಳ ಧಾರ್ಮಿಕ ಕಾರ್ಯಕ್ರಮ ಲೋಕದ ಸಮಸ್ತ ಜನರಿಗೆ ಒಳಿತನ್ನು ಉಂಟುಮಾಡಲಿ ಹಾಗೂ ಒಕ್ಕೂಟದ ವರ್ಷದ ಎಲ್ಲ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು..
ಹವ್ಯಕ ಮಹಾಸಭಾ ದ ನಿರ್ದೇಶಕ ಹಾಗೂ ಹವ್ಯಕ ಮಹಾಮಂಡಳದ ಉಪಾಧ್ಯಕ್ಷ ಸುಬ್ರಾಯ ಭಟ್ಟ ಮಾತನಾಡಿ ಪರಮಪೂಜ್ಯ ರಾಘವೇಶ್ವರ ಶ್ರೀ ಗಳವರು ವೇದೋಪಾಸನೆ ಎಲ್ಲ ವಲಯಗಳಲ್ಲಿ ನಡೆಯಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದ್ದರು ಅಂತೆಯೇ ಇಂದು ಹೆಗಡೆ ವಲಯದ ವಿಪ್ರ ಒಕ್ಕೂಟದವರು ಈ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ ಇಂತಹ ಕಾರ್ಯಕ್ರಮಗಳು ಎಲ್ಲ ಕಡೆ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು..
ವಿಪ್ರ ಒಕ್ಕೂಟದ ಅಧ್ಯಕ್ಷ ಡಾ ವಿ ಕೆ ಹಂಪಿಹೊಳಿ ಯವರು ಅಧ್ಯಕ್ಷತೆ ವಹಿಸಿದ್ದರು.
ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಡಾ ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಡಾ. ಯು ಜಿ ಶಾಸ್ತ್ರಿ ವಂದಿಸಿದರು.
ವಿಪ್ರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.