“ಶಿವ” ಎಂಬ ಪದದ ಮೂಲ
* ಶಿವ – ಎಂದರೆ “ಸಾತ್ವಿಕ, ರಜೋ ಮತ್ತು ತಮೋ ಗುಣಗಳ ಪ್ರಭಾವಕ್ಕೆ ಒಳಗಾಗದವನು ಎಂದರ್ಥ”
* ಶಿವನ ಕೈಯಲ್ಲಿರುವ ತ್ರಿಶೂಲವು ಸಹ ಸಾತ್ವಿಕ, ರಜೋ ಮತ್ತು ತಮೋ ಗುಣಗಳನ್ನು ಗೆದ್ದವನು ಎಂದು ಸೂಚ್ಯವಾಗಿ ತೋರಿಸುತ್ತದೆ. ಈ ಮೂರು ಗುಣಗಳಿಂದ ಶಿವನು ನಮ್ಮ ಲೋಕವನ್ನು ಆಳುತ್ತಾನೆ ಎಂಬುದು ಇದರ ಅರ್ಥ.
* ನಂಬಿಕೆಗಳ ಪ್ರಕಾರ ಶಿವನು ತನ್ನ ಶಂಖಾನಾದದಿಂದ ಸೃಷ್ಟಿ ಕ್ರಿಯೆಗೆ ಚಾಲನೆ ನೀಡಿದನಂತೆ. ಈ ಶಂಖಾನಾದವನ್ನು ಪ್ರಣವನಾದ ಎಂದು ಸಹ ಕರೆಯುತ್ತಾರೆ. ಇದನ್ನು ಆಸ್ತಿಕರು “ಬಿಗ್ ಬ್ಯಾಂಗ್” ಸಿದ್ಧಾಂತದ ಆದಿಯಲ್ಲಿ ಆದ ಶಬ್ದಕ್ಕೆ ತಳುಕು ಹಾಕುತ್ತಾರೆ.
* ಇನ್ನೊಂದು ದಂತ ಕತೆಯ ಪ್ರಕಾರ ಶಿವನ ಡಮರುಗ ನಾದದಲ್ಲಿ “ಓಂ” ಎಂಬ ಶಬ್ದ ಹುಟ್ಟಿತಂತೆ, ಇದರಿಂದ ಶಿವನು ಸಂಸ್ಕೃತ ಭಾಷೆಯನ್ನು ಸೃಷ್ಟಿಸಿದನಂತೆ.
* ಶಿವ-ಪಾರ್ವತಿಯರ ತರಹ ಇರಿ ಎಂದು ಹೇಳುವುದನ್ನು ನಾವು ಕೇಳಿರಬಹುದು. ಆದರೆ ನೆನಪಿಡಿ, ಪಾರ್ವತಿ ಶಿವನ ಮೊದಲ ಪತ್ನಿಯಲ್ಲ!. ಶಿವನ ಮೊದಲ ಪತ್ನಿಯ ಹೆಸರು “ಸತಿ” ಈಕೆ ದಕ್ಷ ಬ್ರಹ್ಮನ ಮಗಳು. ಮುಂದೆ ಆಕೆಯೇ ಹಿಮವಂತನ ಮಗಳು ಪಾರ್ವತಿಯಾಗಿ ಅವತಾರ ಎತ್ತಿದಳು.
* ಆಂಜನೇಯನು ಸಹ ಶಿವನ ಒಂದು ಅವತಾರ. ಈತ ಹನ್ನೊಂದನೆಯ ರುದ್ರಾವತಾರ.
* ನಮ್ಮ ವೇದಗಳು ಶಿವನನ್ನು “ರುದ್ರ” ಎಂದು ಕರೆದಿವೆ. ಮುಂದೆ ಶಿವ, ಈಶ್ವರ ಎಂಬ ಹೆಸರುಗಳು ಜನಪ್ರಿಯಗೊಂಡವು.
* ಶಿವನು ನಾಟ್ಯದ ಹರಿಕಾರ. ಈತ ಯುಗಾಂತ್ಯ ಅಂದರೆ ಪ್ರಳಯ ಕಾಲದಲ್ಲಿ “ತಾಂಡವ” ನೃತ್ಯ ಮಾಡುತ್ತಾನೆ. ಇದನ್ನು ರುದ್ರ ತಾಂಡವ ಎಂದು ಕರೆಯುತ್ತಾರೆ.
* ಅಲ್ಲದೆ ಶಿವನು “ಲಾಸ್ಯ” ಎಂದು ಕರೆಯುವ ನಾಟ್ಯವನ್ನು ಸಹ ಮಾಡುತ್ತಾನೆ. ಇದು ಸೃಷ್ಟಿ ಕಾಲದಲ್ಲಿ ಮಾಡುವ ನಾಟ್ಯ. ಹೀಗೆ ಶಿವನು ಆದಿ ಮತ್ತು ಆಂತ್ಯ ಎರಡರ ಪ್ರವರ್ತಕ.
* ಮಹಾಭಾರತದ ಒಂದು ಕತೆಯ ಪ್ರಕಾರ ತನ್ನ ಅಜೇಯವಾದ ಯಾದವ ವಂಶವನ್ನು ನಾಶಗೊಳಿಸಲು ಮತ್ತು ಆ ಮೂಲಕ ದ್ವಾಪರ ಯುಗವನ್ನು ಅಂತ್ಯ ಮಾಡಲು ಕೃಷ್ಣ ಶಿವನ ಕುರಿತು ತಪಸ್ಸು ಮಾಡಿ, “ಸಾಂಬ” ಎಂಬ ಮಗನನ್ನು ಪಡೆದನು. ಈತನಿಗೆ ದೂರ್ವಾಸರು ನೀಡಿದ ಶಾಪವೆ ಯಾದವರ ಅಂತ್ಯಕ್ಕೆ ಕಾರಣವಾಯಿತು.
* ಘೋರ ರಾಕ್ಷಸನಾದ ಅಂದಕಾಸುರನು ಶಿವನ ಮಗ ( ಶಿವನ ಬೆವರಿನಿಂದ ಜನಿಸಿದವನು). ಶಿವನಿಂದಲೆ ಹತನಾದ ಈತ ಸಾಯುವಾಗ ಶಿವ ನಾಮ ಜಪ ಮಾಡಿದ್ದಕ್ಕಾಗಿ ಶಿವಗಣದ ನಾಯಕನಾದ.
* ಶಿವ ಎಂದರೆ ಭಕ್ತರಿಗೆ ಭಾರಿ ಇಷ್ಟ. ಕೇಳಿದ್ದನ್ನು ನೀಡುವ ದೇವರು ಎಂದರೆ ಶಿವ.
* ಇಂತಹ ಶಿವನ ವರವು ಶಿವನಿಗೆ ಶಾಪವಾಗಿದ್ದು, ಭಸ್ಮಾಸುರನ ಪ್ರಕರಣದಲ್ಲಿ.
* ಶಿವನನ್ನು ಹೆಚ್ಚು ಆರಾಧಿಸಿದವರು ರಾಕ್ಷಸರು.
* ಶಿವನ ಪರಮ ಭಕ್ತರಲ್ಲಿ ಬಹುಶಃ ಮೊದಲು ನಿಲ್ಲುವವನು ರಾವಣ.
* ಶಿವನಿಗಾಗಿ ತನ್ನ ತಲೆಯನ್ನೆ ಕಡಿದು ರುದ್ರವೀಣೆ ನುಡಿಸಿದವನು ರಾವಣ ಮಾತ್ರ!
* ಶಿವನನ್ನು ಮೆಚ್ಚಿಸಲು ತನ್ನ ಹತ್ತು ತಲೆಗಳನ್ನು ಕಡಿದುಕೊಂಡು, ಶಿವನಿಂದಲೆ ತನ್ನ ತಲೆಗಳನ್ನು ಮತ್ತೆ ಪಡೆದಿದ್ದಲ್ಲದೆ, ಶಿವನ ಆತ್ಮಲಿಂಗವನ್ನು ಸಹ ಪಡೆದನು.
* ತನ್ನ ತಪೋಭಂಗ ಮಾಡಿದ ಮನ್ಮಥನನ್ನೆ ಸುಟ್ಟು ಕೊಂದದ್ದು ಈಶ್ವರ. ಮುಂದೆ ಆತ ದ್ವಾಪರ ಯುಗದಲ್ಲಿ ಕೃಷ್ಣನ ಮಗ ಪ್ರದ್ಯುಮ್ನನಾಗಿ ಜನಿಸಿದ!
* ಎಲ್ಲಾ ದೇವರ ದೇವಾಲಯಗಳಲ್ಲಿ ಗರ್ಭಗುಡಿಯ ಸುತ್ತ ವೃತ್ತಾಕಾರವಾಗಿ ಪ್ರದಕ್ಷಿಣೆ ಹಾಕಬೇಕು.
* ಆದರೆ ವಿಶೇಷವಾಗಿ ಶಿವನನ್ನು ಮಾತ್ರ ಹೊಂದಿರುವ ದೇವಾಲಯದಲ್ಲಿ ಶಿವನ ಜಲಾಭಿಷೇಕ ಮಾಡಿದ ನೀರು ಹೋಗುವ ಪಾತಿಯನ್ನು ನಾವು ದಾಟಬಾರದು. ನಮ್ಮ ಪ್ರದಕ್ಷಿಣೆಯನ್ನು ಆ ಪಾತಿ ಅಥವಾ ನೀರು ಹೋಗುವ ಸ್ಥಳಕ್ಕೆ ನಿಲ್ಲಿಸಿ ಪುನಃ ಶಿವನ ಮುಂಭಾಗವನ್ನು ನಾವು ತಲುಪಬೇಕು. ಇದನ್ನು ಅರ್ಧ ಪ್ರದಕ್ಷಿಣೆಯೆನ್ನುತ್ತಾರೆ.
* ಶಿವನ ದೇವಾಲಯದಲ್ಲಿ ಯಾವಾಗಲು ಶಿವನಿಗೆ ಮುಖಮಾಡಿ ನಂದಿಯನ್ನು ಇಟ್ಟಿರುತ್ತಾರೆ. ದಂತಕತೆಗಳ ಪ್ರಕಾರ ಶಿವನು ವಿಷವನ್ನು ಸೇವಿಸಿ ವಿಷಕಂಠನಾದ ನಂತರ ಆ ವಿಷವು ಶಿವನ ಗಂಟಲಿನಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಜೊತೆಗೆ ಇದರಿಂದ ಗಂಟಲು ಉರಿ ಸಹ ಆಗಲು ಶುರುವಾಯಿತಂತೆ. ಧ್ಯಾನ ಪ್ರಿಯನಾದ ಶಿವನಿಗೆ ಇದರಿಂದ ಧ್ಯಾನಭಂಗವಾಗುತ್ತಿತ್ತಂತೆ. ಅದಕ್ಕಾಗಿ ನಂದಿಯನ್ನು ತನ್ನ ಮುಂದೆ ಕುಳ್ಳಿರಿಸಿಕೊಂಡು ಆ ಭಾಗಕ್ಕೆ ಗಾಳಿ ಊದಲು ತಿಳಿಸಿದನಂತೆ. ಹೀಗೆ ನಂದಿ ಯಾವಾಗಲು ಶಿವನ ಮುಂದೆ ಕುಳಿತುಕೊಳ್ಳುವ ಅವಕಾಶ ಪಡೆಯಿತು.
* ಈಗಾಗಿ ನಾವು ಯಾವುದೇ ಕಾರಣಕ್ಕು ನಂದಿಯ ಮುಂದೆ ಹಾದು ಹೋಗಬಾರದು. ಏಕೆಂದರೆ ಇದರಿಂದ ನಂದಿಯ ಕೆಲಸಕ್ಕೆ ತಡೆಯೊಡ್ಡಿದಂತಾಗುತ್ತದೆ. ಶಿವನ ತಪಸ್ಸು ಭಂಗವಾಗುತ್ತದೆ.
* ಇನ್ನು ಧ್ಯಾನ ನಿರತ ಶಿವನಿಗೆ ನಮ್ಮ ಕೋರಿಕೆಗಳನ್ನು, ಹರಕೆಗಳನ್ನು ತೀರಿಸಲು ಹೇಳುವುದಕ್ಕೆ ನಾವು ನಂದಿಯ ಕಿವಿಯನ್ನೆ ಮುಖ್ಯ ಮಾಧ್ಯಮವಾಗಿ ಬಳಸಬೇಕು. ನಂದಿ ನಮ್ಮ ಹರಕೆಗಳನ್ನು ಶಿವನ ಧ್ಯಾನದ ನಂತರ ತಿಳಿಸುತ್ತದಂತೆ.
* ಭಗೀರಥನ ತಪಸ್ಸಿಗೆ ಮೆಚ್ಚಿದ ಇಂದ್ರನು ದೇವಗಂಗೆಯನ್ನು ಭೂಮಿಗೆ ಕಳುಹಿಸಿಕೊಟ್ಟನು. ಆದರೆ ತನ್ನ ಭೀಕರವಾದ ವೇಗದಿಂದ ಗಂಗೆ ಭೂಮಿಯತ್ತ ದುಮ್ಮಿಕ್ಕುತ್ತಿದ್ದ ಗಂಗೆಯ ವೇಗಕ್ಕೆ ಭೂಮಿಗೆ ಅತಿ ಹೆಚ್ಚಿನ ಅಪಾಯವಾಗುವ ಸಂಭವವಿತ್ತು. ಅದನ್ನು ತಪ್ಪಿಸಲು ಶಿವನು ತನ್ನ ಜಡೆಯನ್ನು ಬಿಚ್ಚಿ, ಅದರಲ್ಲಿ ಗಂಗೆಯನ್ನು ಬಂಧಿಸಿದನು. ಹೀಗೆ ಶಿವನು ಗಂಗಾಧರನಾದನು.
* ಇಡೀ ವಿಶ್ವದಲ್ಲಿ ಶನಿಯ ಪ್ರಭಾವಕ್ಕೆ ಒಳಗಾಗದವರು ಯಾರು ಇಲ್ಲ. ಅದಕ್ಕೆ ಶಿವನೂ ಸಹ ಹೊರತಲ್ಲ. ಆದರೆ ಒಂದು ಹೆಚ್ಚುಗಾರಿಕೆ ಏನೆಂದರೆ, ಶನಿಯು ತನ್ನ ಗುರುವಾದ ಶಿವನ ಬಳಿ ಬಂದು “ತನ್ನ ಪ್ರಭಾವ ತೋರಿಸುವ ಸಮಯ ಬಂದಿದೆ ನನಗೆ ಅಪ್ಪಣೆ ನೀಡಿ, ಕಾಲಾವಕಾಶ ಕೊಡಿ” ಎಂದು ಕೇಳಿದ್ದು ಮಾತ್ರ ಶಿವನನ್ನು.
* ಹೀಗೆ ಶನಿಯ ಏಳೂವರೆ ವರ್ಷದ ಸಾಡೆಸಾತಿಗೆ ಶಿವ ಒಪ್ಪಿಗೆ ನೀಡಲಿಲ್ಲ, ಸಿಕ್ಕಾಪ್ಟಟ್ಟೆ ಚೌಕಾಸಿ ಸಹ ಈ ವಿಚಾರವಾಗಿ ನಡೆಯಿತು!. ಇದರ ಕುರಿತು ವಿವಿಧ ಪುರಾಣಗಳು ವಿವಿಧ ಕತೆಗಳನ್ನು ಹೇಳುತ್ತದೆ. ಅದರಲ್ಲಿ ಒಂದೇ ರೀತಿ ಇರುವ ಸ್ವಾರಸ್ಯಕರವಾದ ಎರಡು ಕತೆಗಳನ್ನು ನಿಮ್ಮ ಮುಂದೆ ಇಡುತ್ತೇವೆ.
1) ಶನಿಯ ಕೋರಿಕೆಗೆ ಶಿವನು ಕೇವಲ ಏಳೂವರೆ ನಿಮಿಷ ತನ್ನ ಮೇಲೆ ಶನಿ ಪ್ರಭಾವ ಇರಬೇಕೆಂದು ಹೇಳಿದನು. ಇದಕ್ಕೆ ಶನಿ ದೇವನು ಸಹ ಒಪ್ಪಿದನು. ಶನಿಯ ಮುಂದೆ ಕುಳಿತರೆ ಏನಾಗುವುದೋ ಎಂದು ತಿಳಿದ ಶಿವನು ಅಲ್ಲಿಂದ ಅದೃಶ್ಯನಾಗಿ ಒಂದು ಕತ್ತೆಯ ಹೊಟ್ಟೆಯಲ್ಲಿ ಹೋಗಿ ಕುಳಿತನು. ಶನಿ ಶಿವ ಪ್ರತ್ಯಕ್ಷನಾಗಬಹುದೆಂದು ಅಲ್ಲಿ ನಿಂತೇ ಇದ್ದನು. ಏಳೂವರೆ ನಿಮಿಷದ ನಂತರ ಶಿವನು ಪ್ರತ್ಯಕ್ಷನಾಗಿ ಶನಿಯ ಮುಂದೆ ನಿಂತನು.
2) ಇದೇ ಮಾದರಿಯ ಇನ್ನೊಂದು ದಂತಕತೆಯಲ್ಲಿ ಶಿವನು ಶನಿಗೆ ನಾಳೆ ಬಾ ಎಂದು ಹೇಳಿ, ಭೂಲೋಕದ ಒಂದು ಕಗ್ಗಾಡಿಗೆ ಬಂದು, ಯಾರು ಪ್ರವೇಶಿಸಲಾಗದ ಒಂದು ಗುಹೆಯನ್ನು ಹೊಕ್ಕನಂತೆ. ಅಲ್ಲಿ ಶಿವನು ಏಳೂವರೆ ದಿನಗಳ ಕಾಲ (ಶನಿಯ ಕೋರಿಕೆಯಂತೆ) ಶನಿಯ ಕೈಗೆ ಸಿಗಬಾರದು ಎಂದು ಅವಿತುಕೊಂಡಿದ್ದನಂತೆ. ಏಳೂವರೆ ದಿನಗಳ ಗಡುವು ಮುಕ್ತಾಯವಾದ ನಂತರ ಶಿವನು ಹೊರಗೆ ಬಂದನಂತೆ.
ಈ ಎರಡು ಸಂದರ್ಭಗಳು ಬೇರೆಯಾದರು ಶಿವನ ಪ್ರಶ್ನೆಗೆ ಶನಿಯ ಪ್ರತ್ಯುತ್ತರ ಈ ಸಂದರ್ಭದಲ್ಲಿ ಹೀಗಿದೆ:- ಶಿವ ” ನೋಡಿದೆಯಾ ಶನಿ ನಿನ್ನ ಪ್ರಭಾವಕ್ಕೆ ನಾನು ಸಿಗಲಿಲ್ಲ!”. ಎಂದಾಗ. ಶನಿಯು ಮನ್ನಿಸಿ ಮಹಾದೇವ” ನಾನು ಈಗಾಗಲೆ ನಿಮ್ಮ ಮೇಲೆ ನನ್ನ ಪ್ರಭಾವವನ್ನು ತೋರಿಸಿಬಿಟ್ಟೆ” ಎಂದನಂತೆ!. ಅದು ಹೇಗೆ? ಎಂದು ಶಿವ ಕೇಳಿದಾಗ, ಶನಿಯು ಇಡೀ ಜಗತ್ತಿಗೆ ತಂದೆಯಾದ ನೀವು ನನ್ನ ಪ್ರಭಾವಕ್ಕೆ ಹೆದರಿ ಓಡಿ ಹೋಗಿ ಅವಿತುಕೊಂಡಿರೆಂದರೆ, ನಿಮ್ಮ ಮೇಲೆ ನನ್ನ ಪ್ರಭಾವ ಕೆಲಸ ಮಾಡದೆ ಇನ್ಯಾವುದು ತಾನೇ ಕೆಲಸ ಮಾಡಿತು ಎಂದು ಕೇಳಿದನಂತೆ.
* ಶನಿಯ ಪ್ರಾಮಾಣಿಕತೆಗೆ ಮೆಚ್ಚಿದ ಶಿವನು ಶನಿಗೆ ಇನ್ನು ಮುಂದೆ “ಶನೀಶ್ವರ” ಎಂದು ಸಹ ಕರೆಯುವಂತಾಗಲಿ ಎಂದು ಹರಸಿ ಕಳುಹಿಸಿಕೊಟ್ಟನಂತೆ.
* ಇನ್ನೂ ಕುತೂಹಲಕಾರಿ ವಿಚಾರವೆಂದರೆ, ಶನಿಯು ಪ್ರಪಂಚದಲ್ಲಿ ಎಲ್ಲರೂ ತನ್ನ ಪ್ರಭಾವಕ್ಕೆ ಒಳಗಾಗಬೇಕು ಎಂಬ ವರವನ್ನು ಈ ಮೊದಲೆ ಕೇಳಿದಾಗ ಅದಕ್ಕೆ ತ್ರಿಮೂರ್ತಿಗಳ ಆದಿಯಾಗಿ ಏಳು ಲೋಕದಲ್ಲಿರುವವರು ತಮ್ಮ ಜೀವನದಲ್ಲಿ ಏಳೂವರೆ ವರ್ಷಗಳ ಸಾಡೆಸಾತಿಗೆ ಗುರಿಯಾಗಲೇಬೇಕು ಎಂದು ಹೇಳಿ ತಥಾಸ್ತು ಹೇಳಿದ್ದು, ನಮ್ಮ ಮಹಾಶಿವನೇ!!