ಶಿರಸಿ: ಮಳೆಗಾಲದ ಅವಾಂತರವೋ? ಅಸಮಪರ್ಪಕ ಕಾಮಗಾರಿಯೋ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಶಿರಸಿಯ ಸೇವೀಕೆರೆಯ ಕಾಮಗಾರಿ ಕುರಿತಾಗಿ ಈ ಗೊಂದಲ ಮೂಡಿದೆ. ಅದೇನೇ ಇದ್ದರೂ ಲಕ್ಷಾಂತರ ರೂಪಾಯಿಯ ಕಾಮಗಾರಿ ಮಾತ್ರ ನೀರಿನಲ್ಲಿ ಕೊಚ್ಚಿಹೋಗಿರುವುದು ಮಾತ್ರ ನೊವಿನ ಸಂಗತಿ.
ನಗರದ ಹೃದಯ ಭಾಗದಲ್ಲಿರುವ ದೇವಿಕೆರೆಗೆ ಕಟ್ಟಿದ್ದ ಪಿಚ್ಚಿಂಗ್ ಕುಸಿದು ಮಣ್ಣು ಕೆರೆ ಪಾಲಾಗಿದ್ದು, ಲ್ಯಾಂಡ್ ಆರ್ಮಿಯ ಕಾಮಗಾರಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಕೆಲ ದಿನದಿಂದ ಸುರಿದ ಭಾರಿ ಮಳೆಯಿಂದಾಗಿ ಕೆರೆಯ ದಂಡೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪಿಚ್ಚಿಂಗ್ ಕುಸಿದು ಮಣ್ಣೆಲ್ಲಾ ಕೆರೆ ನೀರು ಸೇರಿದ್ದು, ಕೆರೆ ದಂಡೆ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡ ಲ್ಯಾಂಡ್ ಆರ್ಮಿ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಸುರಿಯುವ ಮಳೆಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಮಾಡಿದ ಕೆಲಸವು ವ್ಯರ್ಥವಾಗುತ್ತಿದೆ. ಈಗಾಗಲೇ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ಕೇಳಿ ಬರುತ್ತಿರುವ ನಡುವೆ ಪಿಚ್ಚಿಂಗ್ ಕುಸಿದಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೇವಿಕೆರೆಯ ಹೂಳು ತೆಗೆದು ವರ್ಷ ಕಳೆದರೂ ಲ್ಯಾಂಡ್ ಆರ್ಮಿ ನಿರ್ಲಕ್ಷದಿಂದ ಕೆರೆಯ ಅಭಿವೃದ್ಧಿ ಕಾಮಗಾರಿ ನಿಂತ ನೀರಾಗಿದೆ. ಕಾಮಗಾರಿ ಮಾಡಲು ಸಾಕಷ್ಟು ಸಮಯಾವಕಾಶವಿದ್ದರೂ ಸಹ ಮಳೆಗಾಲ ಸಮೀಪಿಸುತ್ತಿದ್ದಂತೆ ಕೆಲಸ ಆರಂಭಿಸಿರುವುದೇ ಇಷ್ಟಲ್ಲಾ ಆವಾಂತರಕ್ಕೆ ಕಾರಣವಾಗಿದೆ. ಇವರ ಬೇಜವಬ್ದಾರಿತನದಿಂದ ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿ ನೀರು ಪಾಲಾಗಿದೆ. ಸರ್ಕಾರದ ಹಣವನ್ನು ಬೇಕಾ ಬಿಟ್ಟಿ ವ್ಯರ್ಥ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವವರಾರು ಎಂದು ನಗರವಾಸಿಗಳು ಪ್ರಶ್ನಿಸುತ್ತಿದ್ದಾರೆ.
ಸರಕಾರದ ಹಣ ಸಾರ್ವಜನಿಕರ ಹಣವೇ ಆಗಿದ್ದು ಈ ಬಗ್ಗೆ ಸಾರ್ವಜನಿಕರು ಕೇಳುವ ಪ್ರಶ್ನೆಗಳು ಸೂಕ್ತವೆಂದೇ ಎನಿಸುತ್ತದೆ. ಅದೇನೇ ಇರಲಿ ಇಂತಹ ಕಾಮಗಾರಿಗಳು ನೀರಿನಲ್ಲಿ ಹೋಮ ಮಾಡದಂತೆ ಆಗದಿರಲಿ. ಈ ಬಗ್ಗೆ ಇಲಾಖೆ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಗಳು ರೂಪುಗೊಳ್ಳಲಿ ಎಂಬುದೇ ನಮ್ಮ ಆಶಯ.