ಬೆಂಗಳೂರು: ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನೂ 400 ಹೊಸ 108 ಆಂಬ್ಯುಲೆನ್ಸ್ ಸೇವೆಯನ್ನು ಸದ್ಯದಲ್ಲಿಯೇ ಆರಂಭಿಸಲಿದೆ. ಈಗ ಸರ್ಕಾರದ 108 ಆಂಬ್ಯುಲೆನ್ಸ್ ವಾಹನಗಳ ಸಂಖ್ಯೆ 780 ಆಗಿದೆ.

ಹಾವೇರಿಯಲ್ಲಿ ಇತ್ತೀಚೆಗೆ ರೋಗಿಯೊಬ್ಬರಿಂದ ಆಂಬ್ಯುಲೆನ್ಸ್ ಚಾಲಕ ಲಂಚ ನೀಡುವಂತೆ ಒತ್ತಾಯಿಸಿದ್ದರು ಎಂದು ದಾಖಲಿಸಲಾಗಿದ್ದ ಸ್ವಯಂ ಪ್ರೇರಿತ ಕೇಸಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಅವರಿಗೆ ನೀಡಿದ ಹೇಳಿಕೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಶ್ರೀನಿವಾಸ ಗೌಡ ಹೇಳಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ ಶ್ರೀನಿವಾಸ ಗೌಡ, ಸರ್ಕಾರದ ಹೊಸ ಆಂಬ್ಯುಲೆನ್ಸ್ ಸೇವೆ ಆರಂಭದ ಬಗ್ಗೆ ಮಾಹಿತಿ ನೀಡಿದರು. ದಿನಪೂರ್ತಿ ಉಚಿತ ಆಂಬ್ಯುಲೆನ್ಸ್ ಸೇವೆ ದೊರಕಲು 26ರಿಂದ 30 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಸಾರ್ವಜನಿಕರಿಗೆ ಆರೋಗ್ಯ ಸೇವೆ ದೊರಕುವಂತೆ ಮಾಡಲು 108 ಆಂಬ್ಯುಲೆನ್ಸ್ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಈಗಾಗಲೇ ಇಲಾಖೆಯಡಿ 780 ಆಂಬ್ಯುಲೆನ್ಸ್ ಗಳಿದ್ದು ಇನ್ನೂ 400 ವಾಹನಗಳನ್ನು ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸಿ ರಸ್ತೆಗೆ ಇಳಿಸಲಾಗುವುದು. ರೋಗಿಗಳಿಗೆ ತುರ್ತಾಗಿ ಬೇಕಾಗಿರುವ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುವುದು. ಇನ್ನು ಮೂರು ತಿಂಗಳೊಳಗೆ ಈ ಆಂಬ್ಯುಲೆನ್ಸ್ ಸೇವೆ ಆರಂಭವಾಗಲಿದೆ. 108 ಆಂಬ್ಯುಲೆನ್ಸ್ ಗಳಲ್ಲದೆ 176 ನಗು ಮಗು ಆಂಬ್ಯುಲೆನ್ಸ್ ಸೇವೆ ಕೂಡ ಇದೆ ಎಂದು ಹೇಳಿದರು.
ಸಾಮಾನ್ಯ ಆಂಬ್ಯುಲೆನ್ಸ್ ಸೇವೆಗಳಲ್ಲಿ 759 ಆಂಬ್ಯುಲೆನ್ಸ್ ಗಳು ಕೆಲವು ಪ್ರಮುಖ ಆಸ್ಪತ್ರೆಗಳಲ್ಲಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೊರಕುತ್ತವೆ. ಇವುಗಳಲ್ಲಿ ಎಪಿಎಲ್ ಕಾರ್ಡು ಹೊಂದಿರುವವರಿಗೆ ಕೂಡ ಪ್ರತಿ ಕಿಲೋ ಮೀಟರ್ ಗೆ 3 ರೂಪಾಯಿಯಂತೆ ರಿಯಾಯಿತಿ ದರದಲ್ಲಿ ಮತ್ತು ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ. ಎಲ್ಲಾ 3 ವಿಧದ ಆಂಬ್ಯುಲೆನ್ಸ್ ಗಳನ್ನು ಸೇರಿಸುವ ಬಗ್ಗೆ ಪ್ರಸ್ತಾವನೆಯಿದೆ ಎಂದು ಹೇಳಿದರು.

RELATED ARTICLES  ಪ್ರವಾಹ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರದಿಂದ 195 ಕೋಟಿ ಬಿಡುಗಡೆ.

ರೋಗಿಗಳು ಮೃತಪಟ್ಟರೆ ಅವರ ಸಂಬಂಧಿಗಳು ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ದಾಳಿ ನಡೆಸುವ ಪ್ರಕರಣಗಳು ಅನೇಕ ನಡೆದಿವೆ. ಇಂತಹ ಸಂದರ್ಭದಲ್ಲಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ರಕ್ಷಣೆಗೆ ಪೊಲೀಸ್ ಔಟ್ ಪೋಸ್ಟ್ ನ್ನು ನಿರ್ಮಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಹೇಳಿದರು.

RELATED ARTICLES  ಲೋಕಸಭಾ ಚುನಾವಣೆಗೆ ಸ್ಪರ್ಧಾಳುಗಳ ನಾಲ್ಕನೇ ಪಟ್ಟಿ ಹೊರಡಿಸಿದ ಬಿ.ಜೆ.ಪಿ

ಮೃತರ ಶವಪರೀಕ್ಷೆ ನಡೆಸಿ ಅದನ್ನು ಕುಟುಂಬವರ್ಗಕ್ಕೆ ಹಸ್ತಾಂತರಿಸುವಲ್ಲಿ ಆಸ್ಪತ್ರೆಗಳಲ್ಲಿ ವಿಳಂಬವಾಗುತ್ತಿದ್ದು ಈ ಬಗ್ಗೆ ಕೂಡ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತರು ಹೇಳಿದರು.