ಯೋಗ ಎಂಬುದು ನಮ್ಮ ಋಷಿಮುನಿಗಳು ಕಂಡುಕೊಂಡ ಒಂದು ಜೀವನ ಶೈಲಿ. ಅದರ ಮೂಲಕ ನಮ್ಮೊಳಗಿರುವ ಅಂತಃಶಕ್ತಿಯ ಜಾಗೃತಿ ಮತ್ತು ಅರಿವು ಮೂಡುವುದು. ಅರಿವು ಎಂದರೆ ಜ್ಞಾನ, ಜ್ಞಾನ ಎಂದರೆ ಸತ್ಯ, ಈ ಸತ್ಯ ಮಾರ್ಗದಲ್ಲಿ ನಡೆಯುವುದೇ ಯೋಗ. ಆದರೆ ಆಸನ, ಪ್ರಾಣಾಯಾಮ ಮತ್ತು ಧ್ಯಾನ ಇತ್ಯಾದಿಗಳು ಖಾಯಿಲೆಗಳನ್ನು ವಾಸಿ ಮಾಡುವುದಕ್ಕೆ, ಸ್ಪರ್ಧೆಗೆ, ತೋರಿಕೆಗೆ ಯೋಗವನ್ನು ಸೀಮಿತವಾಗಿರುವುದು ಒಂದು ವಿಪರ್ಯಾಸವೇ ಸರಿ. ಯೋಗ ಎಂಬುದು ಜಗತ್ತಿನ ಎಲ್ಲರ ಆತ್ಮೋನ್ನತಿಗೆ ಸಂಬಂಧಪಟ್ಟದ್ದು. ಅದರ ನಿಜವಾದ ಅರಿವು ನಮಗಿರಬೇಕು.

ಸರಳ ಜೀವನ, ಉದಾತ್ತ ಚಿಂತನೆ ಇದು ಯೋಗದ ಒಂದು ವಿಧಾನ. ಈ ರೀತಿಯಲ್ಲಿ ಬದುಕಿ ಜಗತ್ತಿಗೆ ಬೆಳಕು ನೀಡಿದವರು ನಮ್ಮ ಋಷಿಮುನಿಗಳು. ಇದರ ಒಳ ಅರಿವನ್ನು ಅರಿತುಕೊಂಡಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವಕ್ಕೆ ಯೋಗದ ಮಹತ್ವ ತಿಳಿಸಲು ಮುಂದಾದರು ಮತ್ತು ಅದರಲ್ಲಿ ಯಶಸ್ವಿಯೂ ಆದರು. ಜೂ. 21 ವಿಶ್ವ ಯೋಗ ದಿನವನ್ನಾಗಿ ಆಚರಿಸಲು ವಿಶ್ವದ 175ಕ್ಕೂ ಹೆಚ್ಚು ದೇಶಗಳು ಒಪ್ಪಿಗೆ ನೀಡಿದವು. ಅದರ ಮೂಲಕ ಭಾರತೀಯ ಋಷಿಮುನಿಗಳ ವಿಚಾರಧಾರೆಯನ್ನು ಸ್ವೀಕರಿಸಲು ಮುಂದಾದರು. ಈಗಿರುವ ಪರಿಸ್ಥಿತಿಗೆ ಇದರ ಅವಶ್ಯಕತೆಯೂ ಇದೆ. ಇದರಿಂದ ಕೂಡಲೇ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಾಗದಿದ್ದರೂ ಜಗತ್ತು ಶಾಂತಿಮಯ ಆಗುವುದರಲ್ಲಿ ಸಂಶಯವೇ ಇಲ್ಲ. ಯೋಗ ಜೀವನ ನಮ್ಮದಾದಲ್ಲಿ ಅದು ಸತ್ಯ ಮಾರ್ಗವಾಗಿರುತ್ತದೆ. ಸರಳ ಜೀವನ ಉದಾತ್ತ ಚಿಂತನೆಯದಾಗಿರುತ್ತದೆ. ಈ ರೀತಿಯ ಭಾವನೆ ಪ್ರತಿಯೊಬ್ಬರಲ್ಲೂ ಬಂದಿದ್ದೇ ಆದಲ್ಲಿ ಯಾವುದೇ ಅಹಂಕಾರ, ದ್ವೇಷ, ಅಸೂಯೆ, ಮೋಸ ಇಲ್ಲದೇ ಪ್ರತಿಯೊಬ್ಬರೂ ಮತ್ತೊಬ್ಬರನ್ನು ಬಂಧು ಮಿತ್ರರಂತೆ ಕಾಣುತ್ತಾರೆ. ಜಗತ್ತೇ ಒಂದು ಕುಟುಂಬದ ರೀತಿ ಆಗುತ್ತದೆ. ಆಗ ಭಾರತೀಯರ ಕಲ್ಪನೆಯ ವಸುಧೈವ ಕುಟುಂಬಕಂ ನಿರ್ಮಾಣವಾಗುತ್ತದೆ. ಬಹುಶಃ ಈ ದೂರದೃಷ್ಟಿ ಇಟ್ಟುಕೊಂಡೇ ಮೋದಿಜೀಯವರು ಈ ಕಾರ್ಯಕ್ಕೆ ಕೈ ಹಾಕಿದ್ದಾರೆ ಅನ್ನಿಸುತ್ತದೆ.

ವಿಶೇಷವಾಗಿ ಮಕ್ಕಳಲ್ಲಿ ನಿಜವಾದ ಯೋಗದ ಅರಿವನ್ನು ಮೂಡಿಸುವುದು ಅವಶ್ಯವಾಗಿದೆ. ಬಾಲ್ಯದಲ್ಲಿ ಕಲಿತ ವಿದ್ಯೆ ಜೀವನದಲ್ಲಿ ಶಾಶ್ವತವಾಗಿ ಉಳಿಯುವುದು. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ ಎಂಬ ನಾಣ್ನುಡಿಯಂತೆ ಮಕ್ಕಳಾಗಿದ್ದಾಗ ಕಲಿಯದೇ ಇದ್ದದ್ದು, ದೊಡ್ಡವರಾದಾಗ ಕಲಿಯುವುದು ಸ್ವಲ್ಪ ಕಷ್ಟವೇ ಸರಿ. ಹಾಗಾದರೆ ಮಕ್ಕಳು ಕಲಿಯಬೇಕಾಗಿರುವ ಯೋಗವಾದರೂ ಯಾವುದು? ಮೊದಲನೆಯದೇ ಬೇಗ ಏಳುವುದು, ಸೂರ್ಯೋದಯಕ್ಕಿಂತ ಮುಂಚೆ ಏಳುವುದು. ಹೌದು, ಇದು ಬಹಳ ಮುಖ್ಯವಾದದ್ದು, ಇದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾತ್ರಿ ಹನ್ನೊಂದರ ಒಳಗೆ ಮಲಗಬೇಕು. ಇಲ್ಲವಾದಲ್ಲಿ ದಣಿದಿದ್ದ ಶರೀರ ನಿಧಾನವಾಗಿ ದುರ್ಬಲವಾಗುತ್ತಾ ಹೋಗುತ್ತದೆ, ಚೈತನ್ಯ ಕುಂದುತ್ತದೆ, ನರಗಳು ಶಕ್ತಿಹೀನವಾಗುತ್ತವೆ, ಮನಸ್ಸು ಒತ್ತಡಕ್ಕೆ ಸಿಲುಕುತ್ತದೆ, ಬುದ್ದಿ ಕುಂಠಿತವಾಗುತ್ತದೆ. ಅದಕ್ಕೇ ನಮ್ಮ ಹಿರಿಯರು ಹೇಳಿದ್ದು, ನಿದ್ದೆಗೆಟ್ಟರೆ ಬುದ್ಧಿಗೆಟ್ಟಂತೆ. ಹಾಗಾಗಿ ಬೇಗ ಮಲಗಬೇಕು.
ಬೆಳಗ್ಗೆ ಬೇಗ ಎದ್ದರೆ ಶರೀರ ಮತ್ತು ನರಗಳು ಚೈತನ್ಯಗೊಳ್ಳುವುವು, ಮನಸ್ಸು ನಿರ್ಮಲವಾಗುವುದು, ಬುದ್ಧಿ ಚುರುಕಾಗುವುದು. ಇಷ್ಟು ಮಾತ್ರವಲ್ಲದೇ, ಉದಯ ಸೂರ್ಯನ ಎಳೆಯ ಕಿರಣಗಳಲ್ಲಿರುವ ವಿಟಮಿನ್ ‘ಡಿ’ಯು ನಮಗೆ ಯಥೇಚ್ಛವಾಗಿ ಸಿಗುತ್ತದೆ. ಇದರಿಂದ ಮಲಬದ್ಧತೆ, ಸಂಧಿವಾತ, ತಲೆನೋವು, ಕಣ್ಣಿನ ದೋಷ, ಮಾನಸಿಕ ಒತ್ತಡ ನಿವಾರಣೆಯಾಗುವುದು. ನಂತರ ನಮ್ಮ ನಿತ್ಯಕರ್ಮಾದಿಗಳನ್ನು ಮುಗಿಸಿ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ, ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ ಮಾಡಬೇಕು. ಇದರಿಂದ ಶರೀರ ಸದೃಢಗೊಳ್ಳುವುದು. ನಾವು ಯಾವುದೇ ಕಾರ್ಯ ಮಾಡಬೇಕಾದಲ್ಲಿ ಸದೃಢವಾದ ಶರೀರ ಬಹಳ ಮುಖ್ಯ. ದುರ್ಬಲ ಶರೀರದಿಂದ ಯಾವ ಕಾರ್ಯ ಮಾಡಲೂ ಸಾಧ್ಯವಿಲ್ಲ. ಹಾಗಾಗಿಯೇ ನಮ್ಮ ಹಿರಿಯರು ಹೇಳಿದ್ದು ಶರೀರ ಮಾದ್ಯಂ ಖಲು ಧರ್ಮ ಸಾಧನಂ.

RELATED ARTICLES  ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಅನಂತಕುಮಾರ್ ಹೆಗಡೆ ಹೆಸರು..?

ನಂತರ ಸ್ನಾನ ಮಾಡಬೇಕು. ಸ್ನಾನ ಎಂಬುದು ಒಂದು ಸಂಸ್ಕಾರ. ಸ್ನಾನವು ನಮ್ಮ ಶರೀರದ ಹೊರಭಾಗವನ್ನು ಸ್ವಚ್ಛಗೊಳಿಸಿ, ಒಳಭಾಗವನ್ನು ಚೈತನ್ಯಗೊಳಿಸುವುದು. ಶರೀರದಲ್ಲಿದ್ದ ದಣಿವನ್ನು ನಿವಾರಿಸುವುದು. ಬುದ್ಧಿಯನ್ನು ಚುರುಕುಗೊಳಿಸುವುದು. ನಂತರ ದೇವರ ಮನೆಗೆ ಹೋಗಿ ದೀಪ ಹಚ್ಚಿ, ಸ್ವಲ್ಪ ಸಮಯ ಅಲ್ಲಿಯೇ ಕುಳಿತು ಭಗವಂತನ ನಾಮಸ್ಮರಣೆ ಅಥವಾ ಮಂತ್ರೋಚ್ಛಾರಣೆ, ಜಪ ಯಾವುದಾದರೂ ಒಂದನ್ನು ಮಾಡಬಹುದು. ಇದರಿಂದ ಚಂಚಲವಾದ ಮನಸ್ಸು ಸ್ಥಿರವಾಗುವುದು. ಒತ್ತಡದ ಮನಸ್ಸು ನಿರ್ಮಲವಾಗುವುದು. ಆ ನಂತರ ಮನೆಯಲ್ಲಿ ಇರುವ ಹಿರಿಯರಿಗೆ ಪಾದಗಳಿಗೆ ನಮಸ್ಕರಿಸಬೇಕು. ಇದರಿಂದ ಅನೇಕ ಲಾಭಗಳಿವೆ.

ನಾವು ಹಿರಿಯರಿಗೆ ನಮಸ್ಕರಿಸಿದಾಗ ಅವರು ನಮ್ಮ ತಲೆಯ ನೆತ್ತಿಯ ಮೇಲೆ ಕೈಯಿಟ್ಟು ಒಳ್ಳೆಯದಾಗಲಿ ಎಂದು ಆಶೀರ್ವದಿಸುವರು. ಆಗ ಅವರಲ್ಲಿರುವ ಚೈತನ್ಯ ಶಕ್ತಿಯು ಅವರ ಅಂಗೈಯಿಂದ ನಮ್ಮ ತಲೆಯ ನೆತ್ತಿಯಲ್ಲಿರುವ ಬ್ರಹ್ಮರಂಧ್ರದ ಮೂಲಕ ನಮ್ಮ ಶರೀರವನ್ನು ಪ್ರವೇಶಿಸುವುದು. ಇದರಿಂದ ನಮ್ಮ ಶರೀರದಲ್ಲಿ ಶಕ್ತಿ ಮತ್ತಷ್ಟು ಹೆಚ್ಚುವುದು. ಮತ್ತು ನಮ್ಮೊಳಗಿರುವ ಅಹಂಕಾರವು ನೀಗಿ ವಿನಯತೆ ಬೆಳೆಯುವುದು. ಇದು ತುಂಬಾ ಅವಶ್ಯಕ ಕೂಡಾ. ಹಾಗೆಯೇ ಗುರುಗಳಲ್ಲಿಯೂ ಇದೇ ರೀತಿ ನಡೆದುಕೊಳ್ಳುವುದು.
ಶಾಲೆಯಿಂದ ಮನೆಗೆ ಬಂದ ನಂತರ ಕನಿಷ್ಠ ಒಂದು ಗಂಟೆಯಾದರೂ ಶಾರೀರಿಕವಾದ ಆಟಗಳನ್ನು ಆಟಬೇಕು. ಇದರಿಂದ ಶರೀರದಲ್ಲಿನ ಜಡತ್ವ ನೀಗಿ ಮನಸ್ಸಿನಲ್ಲಿ ಉಲ್ಲಾಸ ಹೆಚ್ಚಾಗುವುದು, ಸಾಹಸ ಪ್ರವೃತ್ತಿ ಬೆಳೆಯುವುದು. ನಾಯಕತ್ವ ಗುಣ, ಬುದ್ಧಿವಂತಿಕೆ, ಸಹಬಾಳ್ವೆ, ಸಾಮರಸ್ಯ, ಹೆಚ್ಚು ಜನರ ಸಂಪರ್ಕ ಮತ್ತು ಧೈರ್ಯ ಬೆಳೆಯುವುದು. ಮಕ್ಕಳು ಆಟ ಆಡುವುದಕ್ಕೆ ಪೋಷಕರು ಸಹಕರಿಸಬೇಕು. ಇಲ್ಲದಿದ್ದರೆ ಮಗು ಏಕಾಂಗಿಯಾಗಿ ಭಯ ಮತ್ತು ಒತ್ತಡದಿಂದ ಹೇಡಿಯಾಗಿ ಬದುಕುವ ಸಂಭವ ಹೆಚ್ಚು . ಕವಿ ಒಂದು ಕಡೆ ಹೇಳುತ್ತಾರೆ:

RELATED ARTICLES  ಗೋಮೂತ್ರದಿಂದ 8 ಔಷಧಗಳನ್ನು ಅಭಿವೃದ್ಧಿಪಡಿಸಿದೆ: ಯೋಗಿ ಸರಕಾರ.

‘ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನಾ
ತೆಂಗೀನ ನೀರ ತೆಕ್ಕೊಂಡು ಬಂಗಾರದ ಮಾರಿ ತೊಳೆದೆನಾ’ ಎಂಥ ಅದ್ಭುತ ಮಾತು.
ಆದರೆ ಈಗಿನ ತಾಯಂದಿರು ಹೇಳುವ ಮಾತು – ಆಟಗೀಟ ಅಂತ ಗೇಟ್ ಹಾರಿದರೆ ಕೈಕಾಲು ಮುರಿತೀನ, ಕೈ ಕಾಲು ಮುಖ ತೊಳೆದ್ಕೊಂಡು ಬಂದು ಸುಮ್ಮೆ ಓದ್ಕೋ ಕುತ್ಕೊಂಡು! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡಕ್ಕೆ ಸಿಲುಕಿರುವ ಮಕ್ಕಳಿಗೆ ಮನೆಯು ಉಸಿರುಕಟ್ಟುವ ವಾತಾವರಣ ಆಗದಿರಲಿ.
ಆಟದಿಂದ ಬಂದ ನಂತರ ಕೈ – ಕಾಲು ತೊಳೆದು, ದೀಪ ಹಚ್ಚಿ, ಸಾಧ್ಯವಾದರೆ ಒಂದು ಭಜನೆಯನ್ನೋ ಅಥವಾ ಶ್ಲೋಕವನ್ನೋ ಹೇಳಿ ನಂತರ ಓದಲು ಕುಳಿತುಕೊಂಡಾಗ ಓದಿದ್ದು ತಲೆಯಲ್ಲಿ ಹಾಗೇ ಉಳಿಯುವುದು. ವಸ್ತುಗಳನ್ನು ನೀಟಾಗಿ ಜೋಡಿಸಿಟ್ಟುಕೊಳ್ಳುವುದು, ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸುವುದು, ಸುಳ್ಳುಗಳನ್ನು ಹೇಳದಿರುವುದು, ಅವಶ್ಯಕತೆ ಇಲ್ಲದೇ ಇರುವ ವಸ್ತುಗಳನ್ನು ಇಟ್ಟುಕೊಳ್ಳದಿರುವುದು, ಕಷ್ಟದಲ್ಲಿ ಇರುವವರಿಗೆ ಸಾಧ್ಯವಾದ ಸಹಾಯ ಮಾಡುವುದು, ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ಇತ್ಯಾದಿಗಳ ಜೊತೆಗೆ ಉತ್ತಮವಾದ ನೀತಿ ಕಥೆಗಳನ್ನು ಮತ್ತು ಮಹಾ ಪುರುಷರ ಕಥೆಗಳನ್ನು ಓದುವುದರಿಂದ ಉತ್ತಮ ಪ್ರಜೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯೋಗ ಎಂದರೆ ಕೇವಲ ಆಸನ ಪ್ರಾಣಾಯಾಮವಲ್ಲ. ಅದು ಯೋಗದ ಒಂದು ಭಾಗ ಎಂಬುದು ಮನಸ್ಸಿನಲ್ಲಿರಲಿ.

ಮೇಲೆ ಹೇಳಿರುವ ಎಲ್ಲ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯೋಗ ಎಂಬ ಶಬ್ದಕ್ಕೆ ನಿಜವಾದ ಅರ್ಥ ಬರುತ್ತದೆ. ಅದಕ್ಕೇ ರೈತನನ್ನು ನೇಗಿಲ ಯೋಗಿ ಎಂದು ಕರೆದಿದ್ದು. ರೈತನ ದಿನಚರಿಯನ್ನು ಗಮನಿಸಿದರೆ ಇದರ ಅರ್ಥ ನಮಗೆ ತಿಳಿಯುತ್ತದೆ. ಮೇಲೆ ಹೇಳಿರುವ ಎಲ್ಲ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಿಜವಾದ ಯೋಗಿಗಳಾಗೋಣ. ಮತ್ತೊಬ್ಬರಿಗಾಗಿ ಅಥವಾ ತೋರಿಕೆಗೆ, ಪ್ರಶಂಸೆಗಾಗಿ ಮಾಡುವುದು ಬೇಡ. ನಿಜವಾದ ಯೋಗ ನಮ್ಮ ಜೀವನದ ಒಂದು ಭಾಗವಾಗಲಿ.
ಜೀವನ ಶೈಲಿಯೇ ಯೋಗವಾಗಲಿ.